

ಕೊಳ್ಳೇಗಾಲ: ನಿವೇಶನ, ಇ-ಸ್ವತ್ತು, ಮನೆ ಸಮಸ್ಯೆ, ವಿದ್ಯುತ್, ಒತ್ತುವರಿ, ಕಾಲುವೆ ಹೂಳು, ಬಸ್ ಸಮಸ್ಯೆ, ಹದಗೆಟ್ಟ ರಸ್ತೆ…ಹೀಗೆ ಹಲವು ಸಮಸ್ಯೆ ಗಳನ್ನು ಜನರು ಎಳೆಎಳೆಯಾಗಿ ಬಿಚ್ಚಿಟ್ಟರು.
ತಾಲೂಕಿನ ಪಾಳ್ಯ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ ಆಯೋಜಿಸಿದ್ದ ಜನಸ್ಪಂದನ ಸಾರ್ವಜನಿಕ ಅಹವಾಲು ಸ್ವೀಕಾರ ಹಾಗೂ ಪರಿಹಾರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಮ್ಮುಖದಲ್ಲಿ ಸಮಸ್ಯೆಗಳು ಅನಾವರಣ ಗೊಂಡವು.
ನಮಗೆ ಇಬ್ಬರು ಮಕ್ಕಳು. ಒಬ್ಬ ಮಗ ಕಾಲವಾಗಿದ್ದು. ಮತ್ತೊಬ್ಬ ರಂಗರಾಜು ಎಂಬಾತ ಊರಿನ ಮನೆಗೆ ಬೀಗ ಜಡಿದು ವಾಸಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಡಿಮಾಂಡ್ ಪತ್ರ ಮಾಡಿಸಿಕೊಂಡು ಕಾಡಿಸುತ್ತಿದ್ದಾರೆ ಎಂದು ತಿಮ್ಮರಾಜೀಪುರದ ದೇವಮ್ಮ ಮತ್ತು ರಾಮದಾಸಯ್ಯ ದಂಪತಿ ಡಿಸಿ ಅವರಿಗೆ ಅರ್ಜಿ ನೀಡಿ ಕಣ್ಣೀರಿಡುತ್ತ ಅಳಲು ತೋಡಿಕೊಂಡರು. ಇದರಿಂದಾಗಿ ನಾವು ಮಗಳಾದ ಜಯಲಕ್ಷ್ಮೀ ಮನೆಯಲ್ಲಿದ್ದೇವೆ. ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಶಿಲ್ಪಾನಾಗ್, ಉಪ ವಿಭಾಗಧಿಕಾರಿ ಮಹೇಶ್ ಅವರನ್ನು ಭೇಟಿ ಮಾಡಿ. ನಿಮಗೆ ನ್ಯಾಯ ಕೊಡಿಸುತ್ತಾರೆ ಎಂದು ಹೇಳಿದರು.
ಗ್ರಾಮದ ಸರ್ವೇ ನಂ. 664ರಲ್ಲಿ ಸ್ವಾಭಾವಿಕ ಹಳ್ಳದ ಜಾಗವನ್ನು ಪ್ರಭಾವಿಯೊಬ್ಬರು ಒತ್ತುವರಿ ಮಾಡಿದ್ದಾರೆ ಎಂದು ಪಾಳ್ಯ ಗ್ರಾಮದ ರಂಗಸ್ವಾಮಿ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಮಂಜುಳಾ, ಈ ಹಿಂದೆಯೂ ಒತ್ತುವರಿಯನ್ನು ತೆರವು ಮಾಡಿಸಲಾಗಿತ್ತು. ಇದೀಗ ಮತ್ತೆ ಒತ್ತುವರಿ ಆಗಿದೆ ಎಂದು ರಂಗಸ್ವಾಮಿ ದೂರಿದ್ದಾರೆ. ಸರ್ವೇ ಮಾಡಿಸಿ ಕ್ರಮವಹಿಸುತ್ತೇವೆ ಎಂದರು. ಇದಕ್ಕೆ ದನಿಗೂಡಿಸಿದ ಡಿಸಿ ಶಿಲ್ಪಾನಾಗ್, ಗೋಮಾಳ ಅಥವಾ ಯಾವುದೇ ಸರ್ಕಾರಿ ಜಾಗ ಒತ್ತುವರಿ ಆಗುವಂತಿಲ್ಲ. ತೆರವು ಮಾಡಿದ್ದರೂ ಕೂಡ ಪದೇ ಪದೆ ಒತ್ತುವರಿ ಮಾಡುವುದು ಸರಿಯಲ್ಲ. ತಹಸೀಲ್ದಾರ್ ಆದ ನೀವು ನಿಯಮಾನುಸರ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು. ನಾಲೆ, ಕೆರೆಗಳು ಒತ್ತುವರಿ ಆಗುತ್ತಿರುವುದಿಂದಲೇ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದೇವೆ. ವಾರದೊಳಗೆ ಸ್ಥಳ ಪರಿಶೀಲಿಸಿ ಶಾಶ್ವತ ಪರಿಹಾರ ನೀಡಿ ಸೂಚನೆ ನೀಡಿದರು.
ನಮ್ಮ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಜನರಿಗೆ ಇರುವ ಸ್ಮಶಾನ ಕಿರಿದಾಗಿದೆ. ಗ್ರಾಮದಲ್ಲಿ 6 ಎಕರೆ ಸರ್ಕಾರಿ ಜಾಗವಿದ್ದು ಇದರಲ್ಲಿ ಸ್ಮಶಾನಕ್ಕೆ ಸ್ಥಳ ನೀಡವಂತೆ ಪಾಳ್ಯದ ಮಾದನಾಯಕ ಮನವಿ ಮಾಡಿದರು. ಇದಕ್ಕೆ ಡಿಸಿ ಶಿಲ್ಪಾನಾಗ್ ಮಾತನಾಡಿ, ಜನರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಸ್ಥಳವನ್ನು ಸ್ಮಶಾನಕ್ಕೆ ನೀಡಲು ಕ್ರಮವಹಿಸಲಾಗುವುದು ಎಂದರು.
ದೊಡ್ಡಿಂದುವಾಡಿ ಗ್ರಾಮದ ಶಿವಶಂಕರ ಮಾತನಾಡಿ, ಗ್ರಾಮದಲ್ಲಿ ಉಪ್ಪಾರ ಜನಾಂಗಕ್ಕೆ ಸ್ಮಶಾನವಿಲ್ಲ ಎಂದು ದೂರು ಅರ್ಜಿ ನೀಡಿದರು. ಇದಕ್ಕೆ ಡಿಸಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಪ್ರತ್ಯೇಕವಾಗಿ ಸ್ಮಶಾನವನ್ನು ನೀಡಲಾಗುವುದಿಲ್ಲ. ಸಾರ್ವಜನಿಕ ಸ್ಮಶಾನ ಕೊಡಬಹುದು. 1 ವರ್ಷದಲ್ಲಿ 500 ಸ್ಮಶಾನ ಮಂಜೂರು ಮಾಡಿದ್ದೇವೆ. ಯಾವ ಗ್ರಾಮಗಳಲ್ಲಿ ಸ್ಮಶಾನ ಸಮಸ್ಯೆಯಿದೆ ಎಂಬ ಬಗ್ಗೆ ಗ್ರಾಮ ಲೆಕ್ಕಿಗರು ಗುರುತಿಸಿ ಪ್ರಸ್ತಾವನೆ ಕಳುಹಿಸಿ ಕೊಡಿ ಎಂದು ತಾಕೀತು ಮಾಡಿದರು.
20 ವರ್ಷಗಳ ಹಿಂದೆ ಸರ್ಕಾರ ನಿವೇಶನ ನೀಡಿ ಹಕ್ಕು ಪತ್ರ ನೀಡಿದೆ. ಈ ಜಾಗಕ್ಕೆ ಇ-ಸ್ವತ್ತು ಕೇಳಿದರೆ ಪಾಳ್ಯ ಪಿಡಿಒ ಈ ಸ್ಥಳ ರಸ್ತೆಗೆ ಸೇರಿದ್ದು ಎನ್ನುತ್ತಾರೆ ಎಂದು ಪಾಳ್ಯ ಗ್ರಾಮದ ವೃದ್ಧೆ ಜಯಮ್ಮ ಅಳಲು ತೋಡಿಕೊಂಡರು. ಪಿಡಿಒ ಜುನೇದ್ ಮಾತನಾಡಿ, ಸರ್ಕಾರದಿಂದ ಹಕ್ಕುಪತ್ರ ನೀಡಿರುವುದು ನಿಜ. ಅದೇ ರೀತಿ 10 ಜನರಿಗೆ ಈ ಸಮಸ್ಯೆ ಆಗಿದೆ ಎಂದರು. ಈ ಬಗ್ಗೆ ಜರೂರಾಗಿ ಕ್ರಮವಹಿಸಿ ವೃದ್ಧೆಗೆ ನಿವೇಶನ ಸಿಗುವಂತೆ ಡಿಸಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋಹಟ್ ಪಿಡಿಒಗೆ ಸೂಚನೆ ನೀಡಿದರು.
ಇಲಾಖೆ ಸ್ವತ್ತನ್ನು ಸುಪರ್ದಿಗೆ ಪಡೆಯಿರಿ: ಹಳೇ ಅಣಗಳ್ಳಿ ದಶರಥ್ ಮಾತನಾಡಿ, ನಗರಸಭೆ ವ್ಯಾಪ್ತಿಯ ಸ.ನಂ 595ವಿ ಅಲ್ಲಿ 67 ಸೆಂಟ್ ಪೊಲೀಸ್ ಇಲಾಖೆ ಸ್ಥಳ ಎಂದು ಎಸಿ ಕೋರ್ಟ್‌ನಲ್ಲಿ ಆದೇಶ ಆಗಿದೆ. ಈ ಜಾಗವನ್ನು ಯಾವಾಗ ನೀವು ನಿಮ್ಮ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳುವರಿ ಎಂದು ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಅವರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕವಿತಾ, ಈ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು.
ಆದ್ಯತೆ ಮೇಲೆ ಕ್ರಮ: ಸಭೆಯಲ್ಲಿ ಸಿದ್ದರಾಜನಾಯಕ ಮಾತನಾಡಿ, ಪಾಳ್ಯದಿಂದ ಸತ್ತೇಗಾಲಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಎಂದರು. ಈ ಬಗ್ಗೆ ಸ್ಥಳದಲ್ಲಿದ್ದ ಪಿಡಬ್ಲುೃಡಿ ಇಂಜಿನಿಯರ್ ಬಳಿ ಮಾಹಿತಿ ಪಡೆದುಕೊಂಡ ಡಿಸಿ, ಆದ್ಯತೆ ಮೇರೆಗೆ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು ಎಂದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಿರ್ದೇಶನ ಬಂದಿದೆ. ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಗಡುವಿನೊಳಗೆ ವಿಲೇವಾರಿ ಮಾಡಬೇಕು. ಈ ಬಗ್ಗೆ ನಾನೇ ಖುದ್ದು ಅರ್ಜಿಗಳ ರಿವ್ಯೆ ಮಾಡುತ್ತೇನೆ. ಈ ವೇಳೆ ಕೆಲಸವಾಗಿಲ್ಲ ಎಂಬ ಮಾತನ್ನು ಅಧಿಕಾರಿಗಳು ಹೇಳ ಕೂಡದು. ಏನಾದರೂ ಸಮಸ್ಯೆ ಇದ್ದರೆ ಡಿಸಿ, ಸಿಇಒ, ಎಸ್ಪಿ ಭೇಟಿ ಮಾಡಿ ಸಹಾಯ ಪಡೆದುಕೊಳ್ಳಿ. ಮುಂದಿನ ಸಭೆಯಲ್ಲಿ ಇಂದು ಬಂದ ಅರ್ಜಿ ಮತ್ತೆ ಬಾರದಂತೆ ನೋಡಿಕೊಳ್ಳಬೇಕು ಎಂದು ಡಿಸಿ ಶಿಲ್ಪಾನಾಗ್ ತಾಕೀತು ಮಾಡಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋಹಟ್, ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಮಂಜುಳಾ, ಗ್ರಾಪಂ ಅಧ್ಯಕ್ಷೆ ಮಂಜುಳಾ, ತಾಪಂ ಮುಖ್ಯ ಇಒ ಶ್ರೀನಿವಾಸ್, ಡಿವೈಎಸ್ಪಿ ಎಂ.ಧರ್ಮೇಂದ್ರ, ನಗರಸಭೆ ಆಯುಕ್ತ ಎ. ರಮೇಶ್ ಮತ್ತಿತರಿದ್ದರು.