

ನೆಲಮಂಗಲ: ನಗರದ ಚಿಕ್ಕೆಲ್ಲಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನಗರಸಭೆ 2025-26ನೇ ಸಾಲಿನ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಸಲಹೆಗಳ ಬದಲಿಗೆ ಸಮಸ್ಯೆಗಳ ಸುರಿಮಳೆಯೇ ಸುರಿಯಿತು.
ನಗರಸಭೆ ವ್ಯಾಪ್ತಿಯ ಪ್ರದೇಶಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳು, ಸಮಸ್ಯೆಗಳಿಗೆ ಪರಿಹಾರ ಕುರಿತಾಗಿ ಸಲಹೆ ಸೂಚನೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಜನಪ್ರತಿನಿಧಿಗಳು, ಸಾರ್ವಜನಿಕರು ಸೇರಿ ವಿವಿಧ ಸಂಘ-ಸಂಸ್ಥೆಗಳ ಸಭೆ ಕರೆಯಲಾಗಿತ್ತು. ಆದರೆ ಸಭೆಯ ಆರಂಭದಿಂದ ಕೊನೆವರೆಗೂ ನಗರಸಭೆ ವ್ಯಾಪ್ತಿಯಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ, ಸ್ವಚ್ಛತೆ, ರಸ್ತೆ ಸಮಸ್ಯೆಗಳ ಕುರಿತಾದ ಚರ್ಚೆಗಳೇ ನಡೆದವು.
ನಗರದ ಕೆಲವೆಡೆ ಸುಸಜ್ಜಿತ ಶೌಚಗೃಹ ವ್ಯವಸ್ಥೆ, ನಗರದಲ್ಲಿ ಸುರಕ್ಷಿತೆಗೆ ಹೆಚ್ಚಿನ ಸಿಸಿ ಕ್ಯಾಮರಾ ಆಳವಡಿಕೆ, ನಗರದ ಅಂಬೇಡ್ಕರ್ ಕ್ರೀಡಾಂಗಣ ರಸ್ತೆ ಅಭಿವೃದ್ಧಿ ಮಾಡುವಂತೆ ಜನಸೈನ್ಯ ಸಂಘಟನೆ ಅಧ್ಯಕ್ಷ ನರಸಿಂಹಯ್ಯ ಒತ್ತಾಯಿಸಿದರು.
ಮುಖಂಡ ಎಚ್.ಜಿ.ರಾಜು ಮಾತನಾಡಿ, ನಗರದಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಘಟಕ ಸೇರಿ ನಗರದ ಬೀದಿ ದೀಪ ನಿರ್ವಾಹಣೆಗೆ ಅನುದಾನ ನೀಡಬೇಕು. ಸ್ವಚ್ಛತೆ ವಿಚಾರವಾಗಿ ನಗರದಲ್ಲಿ ತಾರತಮ್ಯ ನಡೆಯುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದರು.
ನಗರದಲ್ಲಿ ಉಚಿತ ಯೋಗ ಕೇಂದ್ರ ಆರಂಭಿಸುವಂತೆ ಯೋಗಪಟು ಮಹೇಶ್ವರಿ ಮನವಿ ಮಾಡಿದರು.
ದಲಿತ ಸಂಘಟನೆ ಮುಖಂಡ ನಾರಾಯಣ್‌ಮೂರ್ತಿ ಮಾತನಾಡಿ, ಪ.ಜಾತಿ, ಪಂಗಡದವರಿಗೆ ಮೀಸಲಿಟ್ಟ ಅನುದಾನವದಲ್ಲಿ ಆರ್ಥಿಕವಾಗಿ ಸಬಲರಾಗುವ ಯೋಜನೆಯನ್ನು ರೂಪಿಸಬೇಕೆಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಸುಗ್ಗರಾಜು, ಸದಸ್ಯರಾದ ಅಂಜಿನಪ್ಪ, ಶಿವಕುಮಾರ್, ಲತಾಹೇಮಂತ್‌ಕುಮಾರ್, ಲೋಕಾಕ್ಷಿಗಂಗಾಧರ್, ಹೆಚ್ಚುವರಿ ಸದಸ್ಯ ಅಂಜನಮೂರ್ತಿ, ಕೃಪಾನಂದ್, ಮುನಿರಾಜು, ಎಇಇ ನಾಗಲಿಂಗಬಡಿಗೇರ್, ಎಇ ಶ್ರೀನಿವಾಸ್, ಲೆಕ್ಕ ಪರಿಶೋಧಕ ನಾಗೇಶ್, ಮುಖಂಡ ಕೆ.ವಸಂತ್, ಗಂಗಬೈಲಪ್ಪ, ಗಂಗಾಧರ್, ಅರುಣ್ ಕುಮಾರ್, ಪ್ರಸನ್ನ, ಆನಂದ್. ವೈ.ಮೌರ್ಯ, ಬೈರಪ್ಪ ಇದ್ದರು.
"ನಗರದ್ಯಂತ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ ಬಾರಿ 88 ಲಕ್ಷ ರೂ. ಉಳಿತಾಯ ಬಜೆಟ್ ನೀಡಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ಬಾರಿ ಸಾರ್ವಜನಿಕ ಸಲಹೆ, ಸೂಚನೆ ಹಾಗೂ ಜನಪ್ರತಿನಿಧಿಗಳ ಮಾರ್ಗದರ್ಶನದಂತೆ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗುವುದು."
- ಮನುಕುಮಾರ್ ನಗರಸಭೆ ಪೌರಾಯುಕ್ತ
ನ್ಯೂ ಟೌನ್ ರಸ್ತೆ ಅಭಿವೃದ್ಧಿಗೆ 85 ಲಕ್ಷ ರೂ. ಅನುದಾನ
ನಗರಸಭೆ 2025-26ನೇ ಸಾಲಿನ ಆಯ-ವ್ಯಯ ಸಭೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೀಡಿರುವ ಸಲಹೆಗಳನ್ನು ಸರ್ವ ಸದಸ್ಯರ ಗಮನಕ್ಕೆ ತಂದು ಅನುಷ್ಠಾನಗೊಳಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಾಣಕ್ಕೆ 13 ಲಕ್ಷ ರೂ. ಅನುದಾನ ಮೀಸಲಿಸಿದ್ದು, ನೀರಿನ ಸಮಸ್ಯೆಗಾಗಿ ಕಳೆದ ಬಾರಿ 7 ಕೋಟಿ ರೂ. ವೆಚ್ಚದಲ್ಲಿ ಬೋರ್‌ವೆಲ್ ಕೊರೆಸಿ ಪಂಪು ಮೋಟರ್ ಅಳವಡಿಕೆ ಮಾಡಲಾಗಿದೆ. ಈ ಬಾರಿ 15 ಹೊಸದಾಗಿ ಬೋರ್‌ವೆಲ್ ಕೊರೆಸಲಾಗುವುದು. ನ್ಯೂ ಟೌನ್ ರಸ್ತೆ ಅಭಿವೃದ್ಧಿಗೆ 85 ಲಕ್ಷ ರೂ. ಅನುದಾನ ಬಿಡುಗಡೆಯಾದ್ದು, ಶಾಸಕರ ನೇತೃತ್ವದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ರಾಜಗಾಲುವೆ ಒತ್ತುವರಿ ತೆರವು ಗೊಳಿಸಿ ಐದು ಮೇಲ್ಸೆತುವೆ ನಿರ್ಮಾಣ ಮಾಡುವ ಕಾರ್ಯ ಮುಂದಿನ ದಿನಗಳಲ್ಲಿ ಮಾಡುವುದಾಗಿ ಮಾಹಿತಿ ನೀಡಿದರು.