

ಮೈಸೂರು: ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿ, ಉದ್ಯಾನಕ್ಕೆ ಜಾಗ ಕಲ್ಪಿಸಿ, ಖಾತೆ ಮಾಡಿಕೊಡಿ ಎನ್ನುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಮುಡಾ ಅಧ್ಯಕ್ಷರ ಮುಂದೆ ತೆರೆದಿಟ್ಟರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮುಡಾ ಅದಾಲತ್‌ನಲ್ಲಿ ಹಲವರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಭೂ ಪರಿವರ್ತನೆ, ಮನೆ, ನಿವೇಶನ ವರ್ಗಾವಣೆ, ಹಲವಾರು ವರ್ಷ ಕಳೆದರೂ ಖಾತೆ ಇನ್ನೂ ದೊರೆತಿಲ್ಲ, ಮನೆ ಕಂದಾಯ ನಿಗದಿಪಡಿಸಲು ಇನ್ನೂ ಸಾಧ್ಯವಾಗಿಲ್ಲ, ಬಡಾವಣೆಯಲ್ಲಿ ಸಿಎ ನಿವೇಶನಕ್ಕೆ ಜಾಗ ಮೀಸಲಿಡಿ ಎನ್ನುವುದು ಸೇರಿದಂತೆ ಇನ್ನಿತರ ಅಹವಾಲು ಸಲ್ಲಿಸಿದರು. ಮುಡಾ ಅದಾಲತ್‌ನಲ್ಲಿ 70ಕ್ಕೂ ಹೆಚ್ಚು ನಾಗರಿಕರು ಸಮಸ್ಯೆ ಆಗಮಿಸಿದ್ದರು. ಅವರಲ್ಲಿ 50 ಜನರಿಗೆ ಟೋಕನ್ ಸಿಕ್ಕಿತ್ತು.
ಒಂದೇ ನಿವೇಶನ ಇಬ್ಬರಿಗೆ ಹಂಚಿಕೆ: ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಲಾಗಿದೆ. ನನ್ನ ಹೆಸರಿನಲ್ಲೂ ಮತ್ತು ಮತ್ತೊಬ್ಬರ ಹೆಸರಿನಲ್ಲೂ ದಾಖಲೆ ಇದೆ. ಯಾರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿ ಅಂತ ಮನವಿ ಮಾಡಿ ಕಚೇರಿಗೆ ಅಲೆದಾಡುತ್ತಿದ್ದರೂ ಈತನಕ ಪರಿಹಾರವಾಗಿಲ್ಲ. ನೀವೇ ನಿವೇಶನ ಹಂಚಿಕೆ ಮಾಡಿಕೊಡಿ ಎಂದು ಮೆಲ್ಲಹಳ್ಳಿಯ ರಾಮಕೃಷ್ಣ ಮನವಿ ಮಾಡಿದರು. ಖುಷ್ಕಿ ಜಮೀನನ್ನು ಕ್ರಯ ಮಾಡಿಕೊಟ್ಟ ಮೇಲೆ ನನಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಇದೇ ನಿವೇಶನವನ್ನು ಮತ್ತೊಬ್ಬರಿಗೂ ಹಂಚಿಕೆ ಮಾಡಲಾಗಿದೆ. ಇಬ್ಬರಿಗೂ ದಾಖಲೆ ಕೊಟ್ಟಿರುವುದರಿಂದ ತೊಂದರೆಯಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಮಂಜೂರಾಗಿರುವ ನಿವೇಶನವನ್ನು ಹಂಚಿಕೆ ಮಾಡುವಂತೆ ಎಂದು ಅಳಲು ತೋಡಿಕೊಂಡರು.
ಮನವಿ ಆಲಿಸಿದ ಅಧ್ಯಕ್ಷರು ಕೂಡಲೇ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಎಲ್ಲಿ ಲೋಪವಾಗಿದೆ, ಏನಾಗಿದೆ ಮತ್ತು ಯಾವ ರೀತಿಯಲ್ಲಿ ಪರಿಹಾರ ಕಲ್ಪಿಸಿ ನಿವೇಶನ ಹಂಚಿಕೆ ಮಾಡಬೇಕೆಂದು ವರದಿ ಕೊಡಬೇಕು. ತಕ್ಷಣವೇ ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೆಸರೆಯ ನಿವಾಸಿಯೊಬ್ಬರು ಹಣ ಜಮಾವಣೆ ಮಾಡಿದ್ದರೂ ಹಕ್ಕು ಪತ್ರವನ್ನು ನೀಡದೆ ಸತಾಯಿಸಲಾಗುತ್ತಿದ್ದು, ಹಕ್ಕುಪತ್ರ ಕೊಡಿಸಬೇಕು ಎಂದು ಮನವಿ ಮಾಡಿದರು. ಕೆ.ಗಿರೀಶ್ ಎಂಬವರು ನಿವೇಶನ ದಾಖಲಾತಿ ಸರಿಯಾಗಿ ಇರುವ ಬಗ್ಗೆ ದೃಢೀಕರಣ ಪತ್ರ ನೀಡುವಂತೆ ಕೋರಿದರು. ಚಾಮುಂಡೇಶ್ವರಿ ರೈಲ್ವೆ ಬಡಾವಣೆಯ ವೀಣಾ ಎಂಬವರು ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರೂ ಈತನಕ ಮಾಡದೆ ವಿಳಂಬ ಮಾಡಲಾಗುತ್ತಿದೆ. ಲೋಕಾಯುಕ್ತರು, ಹಿಂದಿನ ಆಯುಕ್ತರು ಖಾತೆ ಮಾಡಲು ಆದೇಶ ನೀಡಿದ್ದರೂ ವಿಳಂಬನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು.
ಮನವಿ ಆಲಿಸಿದ ಅಧ್ಯಕ್ಷರು ಕಾನೂನಾತ್ಮಕ ಸಮಸ್ಯೆಗಳು ಇಲ್ಲದ ನಿವೇಶನಗಳಿಗೆ ಖಾತೆ ಮಾಡದೆ ವಿಳಂಬ ಮಾಡಿರುವುದು ಸರಿಯಲ್ಲ. ಯಾವ ಕಾರಣಕ್ಕಾಗಿ ಖಾತೆ ಮಾಡಲು ಬರುವುದಿಲ್ಲವೆಂದು ಹಿಂಬರಹ ಕೊಡಬೇಕು.ಅದನ್ನು ಬಿಟ್ಟು ಕಚೇರಿಗೆ ಅಲೆಯುವಂತೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸದಸ್ಯರಾದ ಎಸ್.ಲಕ್ಷ್ಮೀದೇವಿ, ಎಸ್‌ಬಿಎಂ ಮಂಜು, ಕೆ.ಮಾದೇಶ್, ಜಿ.ಲಿಂಗಯ್ಯ, ಅಧೀಕ್ಷಕ ಇಂಜಿನಿಯರ್ ಚನ್ನಕೇಶವ, ನಗರ ಯೋಜಕ ಸದಸ್ಯ ಶೇಷ ಇದ್ದರು.