ಬರದಲ್ಲೂ ಅರಳಿದ ಹೂವು

ಮಾರುಕಟ್ಟೆಯಲ್ಲಿ ವಹಿವಾಟಿಗಿಟ್ಟಿರುವ ಹೂವುಗಳು.
Baradaluu Aralida Huvu
Published on

ಶ್ರಾವಣ ಹಿನ್ನೆಲೆ ಕೆ.ಜಿ. ಹೂ 250 ರವರೆಗೂ ಮಾರಾಟ

ಎನ್​.ವೆಂಕಟೇಶ್​, ಚಿಕ್ಕಬಳ್ಳಾಪುರ
ಮಳೆಯ ಅಭಾವದಿಂದ ಮುಂಗಾರು ಅವಧಿಯ ಕೃಷಿ ಬೆಳೆಗಳು ಒಣಗಿ ಹೋಗುತ್ತಿರುವುದರ ನಡುವೆಯೂ ಅನುಕೂಲಕರ ವಾತಾವರಣದಿಂದ ಒಳ್ಳೆಯ ಹೂವಿನ ಇಳುವರಿ ಬರುತ್ತಿದೆ. ಜತೆಗೆ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ನಿರೀೆಯಂತೆ ಉತ್ತಮ ದರ ಸಿಗುತ್ತಿದೆ.
ಹೌದು! ಜಡಿ ಮತ್ತು ನಿರಂತರ ಮಳೆಯ ಸಮಸ್ಯೆ ಇಲ್ಲದಿರುವುದು ಹೂವು ಬೆಳೆಗಳಿಗೆ ಅನುಕೂಲಕರವಾಗಿದೆ. ಹೆಚ್ಚಿನ ಬಿಸಿಲು, ಆಗಾಗ ಸೋನೆ ಮಳೆಗೆ ಚೆನ್ನಾಗಿ ಹೂವು ಅರಳುತ್ತಿದ್ದು, ಗುಣಮಟ್ಟದ ಇಳುವರಿ ಸಿಗುತ್ತಿದೆ. ಹಾಗೆಯೇ ಕಳೆದ ಒಂದು ವಾರದಿಂದಲೂ ಕೆ.ಜಿ. ಹೂವಿನ ಬೆಲೆಯು ಕನಿಷ್ಠ 160ರಿಂದ ಗರಿಷ್ಠ 250 ರವರೆಗೂ ಮಾರಾಟವಾಗುತ್ತಿದೆ. ಈ ಮೊದಲು ಗರಿಷ್ಠ ಕೆ.ಜಿ. 90 ರೂಪಾಯಿ ಸಿಗುತ್ತಿತ್ತು.
ಹಿಂದಿನ ಎರಡು ವರ್ಷದಲ್ಲಿ ಧಾರಾರ ಮಳೆಗೆ ಬಹುತೇಕ ಕಡೆ ಹೂವುಗಳು ಹಾಳಾಗಿದ್ದವು. ನಾನಾ ರೋಗಗಳಿಗೆ ತುತ್ತಾಗಿರುವ ಬೆಳೆಯಿಂದ ಪ್ರತಿದಿನ ನಿರೀೆಗೆ ಅನುಗುಣವಾಗಿ ಇಳುವರಿ ಸಿಗುತ್ತಿಲ್ಲ. ಇದರಿಂದ ಒಳ್ಳೆಯ ಬೆಲೆ ಇದ್ದರೂ ಮಾರುಕಟ್ಟೆಗೆ ಪೂರೈಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಬಾರಿ ಜುಲೈ ಬಳಿಕ ತೀವ್ರ ಮಳೆಯ ಅಭಾವ ಉಂಟಾಗಿದೆ. ಇದರ ನಡುವೆ ಬೆಳೆಗಾರರು ಕೊಳವೆ ಬಾವಿಯ ಮೂಲಕ ಸಮರ್ಪಕವಾಗಿ ನೀರು ಪೂರೈಸುತ್ತಿರುವುದರಿಂದ ಹೂವು ಬೆಳೆಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಗಣೇಶನ ಹಬ್ಬದವರೆಗೂ ನಿರೀೆಗೆ ಅನುಗುಣವಾಗಿ ಇಳುವರಿ ಮತ್ತು ದರ ಸಿಗುವ ನಿರೀೆ ಇದೆ. ಮತ್ತೊಂದೆಡೆ ಸೆಪ್ಟೆಂಬರ್​ನಲ್ಲಿ ಹೆಚ್ಚಿನ ಮಳೆ ಬೀಳುವ ಹವಾಮಾನ ಇಲಾಖೆಯ ಮುನ್ಸೂಚನೆಯು ಆತಂಕ ಮೂಡಿಸಿದೆ.

ಹೂವುಗಳಿಗೆ ಒಳ್ಳೆಯ ಬೆಲೆ
ಜಿಲ್ಲೆಯಲ್ಲಿಯೇ 2,500 ಹೆಕ್ಟೇರ್​ನಲ್ಲಿ ಹೂವಿನ ಬೇಸಾಯ ಕೈಗೊಳ್ಳಲಾಗುತ್ತದೆ. ಇಲ್ಲಿನ ಮಾರುಕಟ್ಟೆಗೆ ಜಿಲ್ಲೆ ಮಾತ್ರವಲ್ಲದೇ ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಜಿಲ್ಲೆಯಿಂದ ವ್ಯಾಪಾರಿಗಳು ಆಗಮಿಸುತ್ತಾರೆ. ಈ ಭಾಗದಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೆ ಚಿಕ್ಕಬಳ್ಳಾಪುರ ಮಾರುಕಟ್ಟೆಯಿಂದ ಹೂವು ಪೂರೈಕೆಯಾಗುತ್ತದೆ. ಇಲ್ಲಿ ವರ್ತಕರು, ಗ್ರಾಹಕರು, ರೈತರು ಸೇರಿದಂತೆ ನಿತ್ಯ 20 ಸಾವಿರಕ್ಕೂ ಹೆಚ್ಚು ಜನರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಾರೆ. ಪ್ರಸ್ತುತ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಆಷಾಢದಲ್ಲಿ ಹೂವುಗಳ ಬೆಲೆ ಕನಿಷ್ಠ 30ರಿಂದ ಗರಿಷ್ಠ 90 ರೂಗಳಿಗೆ ಕುಸಿದಿತ್ತು. ಈಗ 160 ರಿಂದ 250 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಚೆಂಡೂ ಹೂವು 60 ರಿಂದ 80, ಕನಕಾಂಬರ 2000&2200, ಗುಲಾಬಿ ಹೂವು 210 ರಿಂದ 260 ರೂ.ಗಳಿಗೆ ಮಾರಾಟವಾಗುತ್ತಿದ್ದು, ಆಗಾಗ ಏರಿಳಿತ ಕಾಣುತ್ತಿದ್ದರೂ ಹಿಂದೆಗೆ ಹೋಲಿಸಿದ್ದಲ್ಲಿ ಪ್ರಸ್ತುತ ಉತ್ತಮ ಬೆಲೆಯೇ ಇದೆ.


ಬಗೆಹರಿಯದ ಹೂವಿನ ಮಾರುಕಟ್ಟೆ:
ಈ ಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆ ನಿರ್ಮಾಣದ ಪ್ರತಿಕ್ರಿಯೆಗಳು ನನೆಗುದಿಗೆ ಬಿದ್ದಿವೆ. ಇದರಿಂದ ತಾತ್ಕಾಲಿಕ ವ್ಯವಸ್ಥೆಯ ಪ್ರದೇಶ, ಎಪಿಎಂಸಿ ಯಾರ್ಡ್​ನಲ್ಲಿ ಮೂಲ ಸೌಕರ್ಯ ಕೊರತೆಯ ನಡುವೆ ಹೂವು ಬೆಳೆಗಾರರು ಮತ್ತು ವ್ಯಾಪಾರ ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ. ಹಿಂದೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯಲ್ಲಿ ( ಕೆ.ವಿ.ಕ್ಯಾಂಪಸ್​ ಬೆಟ್ಟದ ಸಮೀಪ) ಹೂವು ಮಾರುಕಟ್ಟೆ ನಿರ್ಮಾಣಕ್ಕೆ ಗ್ರಾಮದ ಸರ್ವೇ ನಂ. 122ರಲ್ಲಿ 9.20 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿತ್ತು. ಆದರೆ, ಸ್ಥಳಾಂತರದ ವಿವಾದ ಮತ್ತು ಜಾಗದ ವಿಚಾರವಾಗಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಅವೈಜ್ಞಾನಿಕ ಸ್ಥಳದ ಬದಲಿಗೆ ಸೂಕ್ತ ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಿಬೇಕೆಂಬ ಒತ್ತಾಯದಲ್ಲಿ ಪ್ರಕ್ರಿಯೆಯು ನನೆಗುದಿಗೆ ಬಿದ್ದಿದೆ. ಮತ್ತೊಂದೆಡೆ ಸರ್ಕಾರದ ಸ್ಪಷ್ಟ ಆದೇಶ ಮತ್ತು ಮೇಲಧಿಕಾರಿಗಳ ಸೂಚನೆಗಾಗಿ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ.

ಮಾರುಕಟ್ಟೆಯ ಅವ್ಯವಸ್ಥೆ
ಚೊಕ್ಕಹಳ್ಳಿ ಕ್ರಾಸ್​ ಬಳಿ ಸ್ಥಾಪಿಸಿರುವ ಕೃಷಿ ಉತ್ಪನ್ನಗಳ ಹೂವಿನ ಮಾರುಕಟ್ಟೆಯ ಅವ್ಯವಸ್ಥೆಯು ಹೂವು ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ತಲೆ ನೋವಾಗಿ ಪರಿಣಿಮಿಸಿದೆ. ಮಳೆ ಬಂದಾಗ ಈ ಪ್ರದೇಶವು ಜಲಾವೃತಗೊಳ್ಳುವುದರಿಂದ ಉತ್ಪನ್ನಗಳು ಹಾಳಾಗುತ್ತಿವೆ. ಸಮರ್ಪಕವಾಗಿ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಈಗಾಗಲೇ ರೈತರು ಹಳೇ ಎಪಿಎಂಸಿ ಯಾರ್ಡಿನಲ್ಲಿ ಮಳಿಗೆಗಳಿಗೆ ಸ್ಥಳಾಂತರಗೊಂಡಿದ್ದು ಅಲ್ಲೊಂದು, ಇಲ್ಲೊಂದು ಕಡೆ ವ್ಯಾಪಾರ ಎನ್ನುವಂತಾಗಿದೆ.


ಹೆಚ್ಚಿನ ಮಳೆ ಮತ್ತು ಜಡಿ ವಾತಾವರಣ ಇದ್ದಾಗ ಹೂವು ಬೆಳೆಗಳಿಗೆ ನಾನಾ ರೋಗಗಳು ಬಾಧಿಸುತ್ತವೆ. ಜಿಲ್ಲೆಯಲ್ಲಿ ಬರ ಕಾಡುತ್ತಿದ್ದರೂ ಪ್ರಸ್ತುತ ಹೂವುಗಳಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಒಳ್ಳೆಯ ಇಳುವರಿ ಸಿಗುತ್ತಿದೆ.

ಮುನಿರಾಜು, ಹೂವು ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net