ಜನಸ್ಪಂದನದಲ್ಲಿ ಅಹವಾಲುಗಳ ಸುರಿಮಳೆ

mysore
Published on

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳ ಮಹಾಪೂರವೇ ಹರಿದು ಬಂತು..!

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ವಿವಿಧ ಭಾಗಗಳಿಂದ ಸಾರ್ವಜನಿಕರು ಅಹವಾಲು ಹಿಡಿದು ಬಂದರು. ಸಚಿವರೊಂದಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅರ್ಜಿಯನ್ನು ಪಡೆದು ಪರಿಹಾರಕ್ಕೆ ಕ್ರಮ ವಹಿಸಿದರು.


ಇಲ್ಲಿ ಪ್ರತಿಧ್ವನಿಸಿದ ಅಹವಾಲಿನಲ್ಲಿ ಬಹುತೇಕ ಭೂ ಪ್ರಕರಣಗಳಿಗೆ ಸಂಬಂಧಿಸಿದ್ದೇ ಹೆಚ್ಚು. ಜತೆಗೆ, ಕೆಲಸ, ಬಾಕಿ ವೇತನ, ಬಿಪಿಎಲ್ ಕಾರ್ಡ್ ಕೊಡಿಸಿ….ಹೀಗೆ ವೈಯಕ್ತಿಕ ಸಮಸ್ಯೆಗಳು ಮಾರ್ದನಿಸಿದವು. ಮಂಜೂರಾಗಿರುವ ಮನೆ ನಿರ್ಮಿಸಿ ಒಂದು ವರ್ಷವಾದರೂ ಹಣ ಬಂದಿಲ್ಲ ಎಂದು ಎಚ್.ಡಿ.ಕೋಟೆಯ ಕೆಂಪಶೆಟ್ಟಿ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹಣ ಮಂಜೂರು ಮಾಡಿಸಲಾಗುವುದು ಎಂದರು.
ಅಂಧರ ಕಣ್ಣೀರು


ಏಕಲವ್ಯನಗರದ ಅಂಧ ಶಿವಶೆಟ್ಟಿ ಅವರು, ನನಗೆ 4ನೇ ಮಹಡಿಯಲ್ಲಿ ಮನೆ ಕೊಟ್ಟಿದ್ದಾರೆ. ಅಂಧರಾಗಿರುವ ಇಡೀ ಕುಟುಂಬ ಅಲ್ಲಿಗೆ ತೆರಳು ತೊಂದರೆಯಾಗುತ್ತಿದೆ. ಬಲಾಢ್ಯರೆಲ್ಲ ಸೇರಿಕೊಂಡು ಹೀಗೆ ಮಾಡಿದ್ದು, ನೆಲಮಹಡಿಯಲ್ಲಿ ಮನೆ ಕೊಡಿಸಿ, ಬೇರೆ ಕಡೆಯಾದರೂ ಕೊಡಿಸಿ ಎಂದು ಕಣ್ಣೀರು ಹಾಕಿದರು. ಈ ವಿಷಯದಲ್ಲಿ ಮಾನವೀಯ ದೃಷ್ಟಿಯಲ್ಲಿ ಸಹಾಯ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.


ಅಕ್ರಮ ಖಾತೆ ರದ್ದು, ಅಧಿಕಾರಿ ವಿರುದ್ಧ ಕ್ರಮ


ಮೈಸೂರು ತಾಲೂಕು ಇಲವಾಲ ಹೋಬಳಿ ಮಾದಗಳ್ಳಿ ಬಳಿ ಕನಕ ಗೃಹ ನಿರ್ಮಾಣ ಸಹಕಾರ ಸಂಘದಿಂದ 32 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿ ಸಿಎ ನಿವೇಶನ, ಉದ್ಯಾನ, ರಸ್ತೆ ಜಾಗದಲ್ಲಿ ಕಾನೂನುಬಾಹಿರವಾಗಿ ನಿವೇಶನ ರೂಪಿಸಿ ಮಾರಾಟ ಮಾಡಿದ್ದು, ಈ ಸರ್ಕಾರಿ ಜಾಗವನ್ನು ಉಳಿಸಿ ಅಕ್ರಮ ಖಾತೆಯನ್ನು ರದ್ದುಪಡಿಸಬೇಕು ಎಂದು ಅಲ್ಲಿಯ ನಿವಾಸಿಗಳು ಆಗ್ರಹಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಖಾತೆಗಳು ರದ್ದುಪಡಿಸಿ. ಜತೆಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿಗೆ ನಿರ್ದೇಶಿಸಿದರು.


‘ಕರೊನಾ’ ವೇತನ ಬಿಡುಗಡೆ ಸೂಚನೆ:

ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳ ಸಿಬ್ಬಂದಿಗೆ ಕರೊನಾ ಕಾಲದ ವೇತನ ನೀಡಿಲ್ಲ. ಕಾರ್ಮಿಕ ನ್ಯಾಯಾಲಯ ಈ ಕುರಿತು ಆದೇಶಿಸಿದೆ. 93 ಲಕ್ಷ ರೂ.ನಲ್ಲಿ 53 ಲಕ್ಷ ರೂ.ಬಂದಿದೆ. 7ರಲ್ಲಿ 3 ಇತ್ಯರ್ಥವಾಗಿ, 4 ಪ್ರಕರಣಗಳು ಬಾಕಿ ಇವೆ. ಉಳಿಕೆ ಪ್ರಕರಣಗಳ ವೇತನ ಕೊಡಿಸಬೇಕು ಎಂದು ಎಐಡಿಎಸ್‌ಒ ಸಂಘಟನೆಯ ಮುದ್ದುಕೃಷ್ಣ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಬಾಕಿ ವೇತನ ನೀಡುವಂತೆ’ ಅಧಿಕಾರಿಗಳಿಗೆ ನಿರ್ದೇಶಿಸಿದರು.


ಇಲವಾಲ ಗ್ರಾಪಂ ವ್ಯಾಪ್ತಿಯ ಕರಕನಹಳ್ಳಿ ಬಳಿ ಹೆದ್ದಾರಿಗಾಗಿ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು, ಭೂಮಿ ಕಳೆದುಕೊಂಡ 32 ಜನರಿಗೆ ಪರಿಹಾರ ಕೊಟ್ಟಿಲ್ಲ ಎಂದು ರೈತರು ದೂರಿದರು. ಈ ಕುರಿತು ದಾಖಲೆ ಪರಿಶೀಲನೆ ಮಾಡಲಾಗುತ್ತಿದ್ದು, ಅರ್ಹ ಭೂಮಿ ಮಾಲೀಕರಿಗೆ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದು ಡಿಸಿ ತಿಳಿಸಿದರು.


ವೃದ್ಧ ರೈತ ಶಿವಲಿಂಗೇಗೌಡ ಅವರು, ನನ್ನ ಜಮೀನು ಒತ್ತುವರಿ ಮಾಡಿಕೊಂಡು ನನಗೆ ಧಮ್ಕಿ ಹಾಕುತ್ತಾರೆ. ಎಲ್ಲಿ ಹೋದರೂ ಕೆಲಸ ಆಗಲ್ಲ, ಏನು ಮಾಡಿಕೊಳ್ಳಲು ಆಗಲ್ಲ ಎಂದು ಹೆದರಿಸುತ್ತಾರೆ. ಸರ್ವೇ ಮಾಡಿಸಿ ಜಮೀನಿನಲ್ಲಿ ಹಾಕಿರುವ ಕಲ್ಲುಗಳನ್ನು ಸಹ ಕಿತ್ತು ಹಾಕಿದ್ದಾರೆ. ಜಯಪುರ ಪೊಲೀಸರು ಸಹ ಅವರ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.


ಇದಕ್ಕೆ ಸ್ಪಂದಿಸಿದ ಸಚಿವರು, ಇವರಿಗೆ ರಕ್ಷಣೆ ಕೊಡಿ, ಎರಡು ಕಡೆಯವರನ್ನು ಕರೆಸಿಕೊಂಡು ದಾಖಲೆ ಪರಿಶೀಲಿಸಿ ಕಾನೂನು ರೀತಿ ಕ್ರಮ ವಹಿಸಬೇಕು ಎಂದು ಎಸ್‌ಪಿ ವಿಷ್ಣುವರ್ಧನ್‌ಗೆ ಸೂಚಿಸಿದರು.


ಕೆಐಎಡಿಬಿ ಜಮೀನು ಸ್ವಾಧೀನ ಪಡೆಸಿಕೊಂಡು 12 ವರ್ಷವಾದರೂ ಪರಿಹಾರ ಕೊಟ್ಟಿಲ್ಲ. ಇತ್ತ ಜಮೀನು ಸಹ ಇಲ್ಲದಂತಾಗಿದೆ ಎಂದು ರೈತರು ಕಣ್ಣೀರು ಹಾಕಿದರು. ಈ ಕುರಿತು ಪರಿಶೀಲನೆ ಮಾಡುವುದಾಗಿ ಡಿಸಿ ಭರವಸೆ ನೀಡಿದರು.


ಹೊಸ ಬಿಪಿಎಲ್ ಕಾರ್ಡ್: ಅ.1ರಿಂದ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.
ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಎರಡು ವರ್ಷವಾದರೂ ಕೊಟ್ಟಿಲ್ಲ ಎಂದು ಕೃಷ್ಣ ಎಂಬ ವ್ಯಕ್ತಿ ಅಹವಾಲು ಸಲ್ಲಿಸಿದಾಗ ಪ್ರತಿಕ್ರಿಯಿಸಿದ ಡಿಸಿ, ಇಷ್ಟು ದಿನ ಹೊಸದಾಗಿ ಬಿಪಿಎಲ್ ಕಾರ್ಡ್ ನೀಡುತ್ತಿರಲಿಲ್ಲ. ಅ.1ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಿದ ಅರ್ಹರಿಗೆ ದೊರೆಯಲಿದೆ ಎಂದು ತಿಳಿಸಿದರು.


ಬಿಪಿಎಲ್ ಕಾರ್ಡ್ ಕೊಡಿಸಿ:


ಕೂಲಿ ಕೆಲಸ ಮಾಡುತ್ತಿರುವೆ. ಆದರೆ ತೆರಿಗೆ ಪಾವತಿದಾರ ಎಂದು ಹೇಳಿ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗಿದೆ ಎಂದು ಮಹಿಳೆಯೊಬ್ಬರು ಅಳಲು ತೊಡಿಕೊಂಡರು. ಮತ್ತೊಬ್ಬ ಮಹಿಳೆ, ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ನನಗೆ 3 ತಿಂಗಳಿಂದ ವೇತನ ಕೊಟ್ಟಿಲ್ಲ ಎಂದು ದೂರು ಹೇಳಿಕೊಂಡರು.


ವೀಳ್ಯದೆಲೆ ಬೆಳೆಗಾರರಿಗೆ ಹಕ್ಕುಪತ್ರ:

ಸೆ.29ರಂದು ವೀಳ್ಯದೆಲೆ ಬೆಳೆಗಾರರಿಗೆ ಹಕ್ಕು ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಲಿದ್ದಾರೆ. 245 ಬೆಳೆಗಾರರಿದ್ದಾರೆ. ಈ ಪೈಕಿ 85 ಜನರನ್ನು ಗುರುತಿಸಲಾಗಿದೆ. ಈ ಸಂಖ್ಯೆ 100 ದಾಟಬಹುದು. ಇವರಿಗೆಲ್ಲ ಹಕ್ಕು ಪತ್ರವನ್ನು ಕೊಡಲಾಗುವುದು ಎಂದು ಈ ಕುರಿತು ಅರ್ಜಿ ಸ್ವೀಕರಿಸಿದ ಬಳಿಕ ಸಚಿವರು ತಿಳಿಸಿದರು.
ದಸರಾದಲ್ಲಿ ಅವಕಾಶ ಕೊಡಿಸಿ:
ನಿಗಮ-ಮಂಡಳಿಯಲ್ಲಿ ಸ್ಥಾನ ಕಲ್ಪಿಸಿಕೊಡಿ ಎಂದು ಒಬ್ಬರು ಹೇಳಿದರೆ, ಕಲಾವಿದರೊಬ್ಬರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿಕೊಂಡರು. ಸಿದ್ದರಾಮನಹುಂಡಿ ಮಹಿಳೆಯೊಬ್ಬರು ‘ಕೆಲಸ ಕೊಡಿಸಿ’ ಎಂದು ಕೋರಿದರು.

ಸಚಿವರಿಗಾಗಿ ಕಾಯ್ದ ಜನರು ಹೈರಾಣ

ಸಚಿವರಾಗಿ ಸಾರ್ವಜನಿಕರು ಕಾಯ್ದು ಹೈರಾಣರಾದರು. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಶುರುವಾಗಬೇಕಿತ್ತು. ಆದರೆ ಸಚಿವರು ಬರುವುದು ಬರೋಬ್ಬರಿ ಎರಡು ತಾಸು ತಡವಾಯಿತು. ಬಂದ ಜನರು ಕುಳಿತುಕೊಳ್ಳಲು ಜಿಪಂ ಕಚೇರಿ ಎದುರು ಪೆಂಡಾಲ್ ಹಾಕಿ, ಕುರ್ಚಿ ವ್ಯವಸ್ಥೆ ಏನೋ ಮಾಡಲಾಗಿತ್ತು. ಆದರೆ ಕಾಯ್ದು ಕಾಯ್ದು ಬಸವಳಿದರು. ಮಧ್ಯಾಹ್ನ 12.30ಕ್ಕೆ ಸಚಿವರ ಆಗಮನದ ಬಳಿಕ ಅಹವಾಲು ಆಲಿಸಲು ಶುರು ಮಾಡಿದರು. ಜನರ ಸರದಿ ಸಾಲು ಮಾತ್ರ ಕಡಿಮೆ ಆಗಲಿಲ್ಲ. ಮಧ್ಯಾಹ್ನ 3 ಗಂಟೆ ತನಕ ಜನರೂ ಇದ್ದರು. ಮೊದಲೇ ನೋಂದಣಿ ಮಾಡಿಸಿಕೊಂಡವರನ್ನು ಒಬ್ಬೊಬ್ಬರಾಗಿ ಸಭಾಂಗಣದೊಳಗೆ ಬಿಡಲಾಯಿತು. ಸರದಿ ಬರುವ ಹೊತ್ತಿಗೆ ಅಹವಾಲುದಾರರು ಸುಸ್ತಾಗಿ ಹೋಗಿದ್ದರು.

*ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಬೇಕು ಎಂದು ಮಂಜುಶೆಟ್ಟಿ ಆಗ್ರಹ
*120 ಮಹಿಳೆಯರನ್ನು ಒಳಗೊಂಡ ಸ್ತ್ರೀಶಕ್ತಿ ಸಂಘಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದು ಶಕ್ತಿನಗರದ ತುಳಸಿ ವಿನಂತಿ.

  • ತಿ.ನರಸೀಪುರ ತಾಲೂಕಿನ ಎಂ.ಸಿ.ಹುಂಡಿಯಲ್ಲಿ ಸ್ಮಶಾನ ಇಲ್ಲ. ಇದಕ್ಕಾಗಿ ಭೂಮಿ ಕಲ್ಪಿಸಿಕೊಡಬೇಕು ಎಂದು ಸಿ.ರಾಜೇಶ್ ಒತ್ತಾಯ.
    *ದಡದಳ್ಳಿ ಬಳಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ 9 ಇಲಾಖೆಗಳು ಎನ್‌ಒಸಿ ಕೊಟ್ಟಿವೆ. ಆದರೆ ಮುಡಾ ಮಾತ್ರ ಕೊಡುತ್ತಿಲ್ಲ. 9 ತಿಂಗಳಿಂದ ಸತಾಯಿಸಲಾಗುತ್ತಿದೆ ಎಂದು ಅರ್ಜಿದಾರರೊಬ್ಬರ ದೂರು
  • ಮುಡಾದ ಹೊರಗುತ್ತಿಗೆ ಸಿಬ್ಬಂದಿಗೆ ಬಾಕಿ ಇರುವ 10 ತಿಂಗಳ ವೇತನ ಕೊಡಿಸಬೇಕು ಎಂದು ಆ ಸಿಬ್ಬಂದಿ ವಿನಂತಿ.
  • ಅನೈರ್ಮಲ್ಯಕ್ಕೆ ಕಾರಣವಾಗಿರುವ ಕೆಸರೆಯ ಕುರಿಮಂಡಿಯನ್ನು ಸ್ಥಳಾಂತರಿಸಬೇಕು ಎಂದು ಮಂಚೇಲಿಂಗಯ್ಯ ಕೋರಿಕೆ.
  • ಡಿಸಿ ಕಚೇರಿ ಆವರಣದಲ್ಲಿ ವಾಲ್ಮೀಕಿ ಪ್ರತಿಮೆ ನಿರ್ಮಾಣ, ಎಸ್‌ಟಿ ವಿದ್ಯಾರ್ಥಿಗಳಿಗೆ 10 ಹಾಸ್ಟೆಲ್ ನಿರ್ಮಾಣಕ್ಕೆ ಮನವಿ ಸಲ್ಲಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net