

ಮುಳಗುಂದ: ಮನುಷ್ಯನ ಜೀವನ ಅನುಭವಗಳ ಪ್ರವಾಹ. ಒಮ್ಮೆ ಸುಖ, ಮತ್ತೊಮ್ಮೆ ದುಖಃ ಬರುತ್ತಿರುತ್ತದೆ. ಇದಕ್ಕೆ ಮೂಲ ಕಾರಣ ನಾವು ನೋಡುವ ದೃಷ್ಟಿಕೋನವಾಗಿದೆ ಎಂದು ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿ ನಿರ್ವಿುಸಲಾದ ಮಾರುತಿ ದೇವಸ್ಥಾನ ಹಾಗೂ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ನೋಡುವ ದೃಷ್ಟಿಕೋನ ಪರಸ್ಪರ ಬದಲಾಗಿರುತ್ತದೆ. ನಾವು ನೋಡುವ ದೃಷ್ಟಿಕೋನ ಆಶಾದಾಯಕವಾಗಿದ್ದು, ಅದರಿಂದಲೇ ದುಖಃ ಉಂಟಾಗುತ್ತದೆ. ಇಂತಹ ವ್ಯತ್ಯಾಸದಿಂದ ಜಗತ್ತಿನಲ್ಲಿ ಸುಖ-ದುಖಃಗಳು ಬರುತ್ತವೆ. ಜಗತ್ತನ್ನು ಯಾರಿಂದಲೂ ಬದಲಿಸಲಾಗುವುದಿಲ್ಲ ಎಂದರು.
ಸಾನ್ನಿಧ್ಯವಹಿಸಿದ್ದ ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾವು ಪ್ರಪಂಚವನ್ನು ಒಳ್ಳೆಯ ದೃಷ್ಟಿಕೋನದಿಂದ ಕಾಣಬೇಕು. ಪ್ರತಿ ವಸ್ತು, ವ್ಯಕ್ತಿ, ವಿಷಯ, ವಿಚಾರ ಜೀವನದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಸಹ ನಾವೆಲ್ಲರೂ ಒಳ್ಳೆಯ ದೃಷ್ಟಿಯಿಂದಲೇ ನೋಡಬೇಕು ಎಂದರು.
ಸಮ್ಮುಖ ವಹಿಸಿದ್ದ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿ, ಅಣು ಅಣುವಿನಲ್ಲಿಯೂ ದೇವರಿದ್ದಾನೆ. ನಮ್ಮ ಭಾವನೆಗಳಲ್ಲಿ ಎಲ್ಲವೂ ಅಡಕವಾಗಿದೆ ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು ಎಂದರು.
ಗುರಣ್ಣ ನೀಲಗುಂದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಶರಣು ಪಾಟೀಲ, ಶಿವಣ್ಣ ನೀಲಗುಂದ, ಎಂ.ಡಿ. ಬಟ್ಟೂರ, ಡಾ.ಎಸ್.ಸಿ. ಚವಡಿ, ಹನುಮಂತಪ್ಪ ಬಿಡನಾಳ, ಕೃಷ್ಣಾ ಕುಷ್ಟಗಿ, ಬಿ. ಶರಣಪ್ಪ, ರಾಮಣ್ಣ ಕಮಾಜಿ, ಬಿ.ವಿ. ಸುಂಕಾಪೂರ, ಶಿವಣ್ಣ ಚರಾರಿ, ಮಹೇಶ ದೇಸಾಯಿ, ಪರಶುರಾಮ ವಂಟಕರ್, ಅಶೋಕ ಸೋನಗೋಜಿ, ಸಂಜಯ ನೀಲಗುಂದ, ಹೊನ್ನಪ್ಪ ನೀಲಗುಂದ, ಶಿದ್ದಪ್ಪ ಶಿರಹಟ್ಟಿ, ವೆಂಕಟೇಶ, ಅಶೋಕ ಹುಣಶಿಮರದ, ಲಿಂಗರಾಜ ಬಟ್ಟೂರ, ಜೈ ಮಾರುತಿ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಇದ್ದರು.