

ಹುಣಸೂರು: ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನೀಡಿದ್ದು, ಹಿಂಪಡೆಯಲು ಆದೇಶವಿದ್ದರೂ ಮೀನಮೇಷ ಏಕೆ ಎಣಿಸುತ್ತಿದ್ದೀರಿ ಸರ್.. ಫುಟ್‌ಪಾತ್ ಅಂಗಡಿಗಳ ಹಾವಳಿಯಿಂದಾಗಿ ಮಳಿಗೆ ವರ್ತಕರಿಗೆ ವ್ಯವಹಾರ ನಡೆಯುತ್ತಿಲ್ಲ.. ಫುಟ್‌ಪಾತ್ ತೆರವು ಕಾರ್ಯಾಚರಣೆ ಯಾವಾಗ?..
ಹುಣಸೂರು ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ಬಿಚ್ಚಿಟ್ಟ ಪರಿ ಇದಾಗಿತ್ತು.
ಬಿಳಿಕೆರೆ ಕೆಂಪರಾಜು ಮಾತನಾಡಿ, ತಾಲೂಕಿನ ಬಿಳಿಕೆರೆಯಲ್ಲಿ 20 ವರ್ಷಗಳ ಹಿಂದೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒಕ್ಕಲಿಗ ಸಮುದಾಯ ಭವನಕ್ಕೆ ನೀಡಲಾಗಿತ್ತು. ಈ ಕುರಿತು ನಾನು ಸರ್ಕಾರಿ ಆಸ್ತಿಯನ್ನು ಉಳಿಸುವತ್ತ ನಡೆಸಿದ ಹೋರಾಟದ ಫಲವಾಗಿ ವರ್ಷದ ಹಿಂದೆ ಭೂಮಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ತನ್ನ ವಶಕ್ಕೆ ಪಡೆಯಲು ಸರ್ಕಾರ ಸೂಚಿಸಿದೆ. ಹೀಗಿದ್ದೂ ತಾಲೂಕು ಪಂಚಾಯಿತಿ ಅಧಿಕಾರಿಗಳು, ಗ್ರಾ.ಪಂ. ಪಿಡಿಒ ಈ ಕುರಿತು ಕ್ರಮ ವಹಿಸುತ್ತಿಲ್ಲ. ನಿಮಗೆ ನಿಮ್ಮ ಆಸ್ತಿ ಬೇಡವೇನ್ರಿ? ನನ್ನ ಆಸ್ತಿ ಬಗ್ಗೆ ನಾನು ಹೋರಾಡುತ್ತಿಲ್ಲ ಸ್ವಾಮಿ, ನೀವು ಯಾರ ಮುಲಾಜಿಗೇನಾದ್ರು ಒಳಗಾಗಿದ್ದೀರ. ನಿವೇಶನ ವಶಕ್ಕೆ ಪಡೆದು ಅಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಒತ್ತಾಯಿಸಿದರು. ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್ ಮಾತನಾಡಿ, ಸರ್ಕಾರದ ಆದೇಶವಿದ್ದರೂ ಯಾಕೆ ವಿಳಂಬವಾಗಿದೆ ಎಂದು ಪ್ರಶ್ನಿಸಿದಾಗ, ಸೆ.16ರಂದು ಈ ಕುರಿತು ಸಭೆ ಆಯೋಜಿಸಿದ್ದು, ಶೀಘ್ರ ವಶಕ್ಕೆ ಪಡೆಯುವುದಾಗಿ ಇಒ ಕೆ.ಹೊಂಗಯ್ಯ ಉತ್ತರಿಸಿದರು.
ನಗರದ ಹಳೇ ಬಸ್‌ನಿಲ್ದಾಣದ ಬಳಿಯ ಫುಡ್‌ಬಜಾರ್ ಮಾಲ್‌ನಿಂದ ಆರಂಭಗೊಂಡು ಅಕ್ಷಯ ಭಂಡಾರ್‌ವರೆಗಿನ ಫುಟ್‌ಪಾತ್ ಸಂಪೂರ್ಣವಾಗಿ ತಳ್ಳುವ ಗಾಡಿಗಳಿಂದ ತುಂಬಿಹೋಗಿದ್ದು ನಗರಸಭೆಯ ಮಳಿಗೆಗಳಲ್ಲಿ ವ್ಯಾಪಾರ ನಡೆಸುವ ವರ್ತಕರಿಗೆ ಆರ್ಥಿಕವಾಗಿ ತೀವ್ರ ಹೊಡೆತ ಬಿದ್ದಿದೆ. ಈಗಾಗಲೇ ಎರಡು ಬಾರಿ ಲೋಕಾಯುಕ್ತ ಸಭೆಯಲ್ಲಿ ಈ ಕುರಿತು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ನಾಮ್‌ಕೇ ವಾಸ್ತ್ತೆಗೆ ಒಂದೆರಡು ಬಾರಿ ನಗರಸಭೆ ಅಧಿಕಾರಿಗಳು ತೆರವುಗೊಳಿಸುವ ಪ್ರಕ್ರಿಯೆ ನಡೆಸಿ ಸುಮ್ಮನಾಗುತ್ತಿದ್ದಾರೆ. ಮತ್ತೆ ಫುಟ್‌ಪಾತ್ ವ್ಯಾಪಾರಿಗಳು ಬಂದು ಕೂರುತ್ತಿದ್ದಾರೆ. ಬಂಡವಾಳ ಹಾಕಿಕೊಂಡು ಬಸವಳಿಯುತ್ತಿದ್ದೇವೆ ಎಂದು ವರ್ತಕರಾದ ರಾಜೇಶ್ ಕಾಕಡೆ, ದಾಮೋದರ್, ಮಂಜುನಾಥ್ ಇತರರು ಅವಲತ್ತುಕೊಂಡರು. ಪೌರಾಯುಕ್ತೆ ಕೆ.ಮಾನಸ ಮಾತನಾಡಿ, ಶೀಘ್ರದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಖಾಸಗಿ ವ್ಯಕ್ತಿ ಕಂಪ್ಯೂಟರ್ ಆಪರೇಟರ್ಕೊತ್ತೇಗಾಲ ಗ್ರಾಮದ ಯುವಕ ಚೇತನ್ ರಾಜ್ ಮಾತನಾಡಿ, ಕೊತ್ತೇಗಾಲ ಗ್ರಾ.ಪಂ.ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಖಾಸಗಿ ಮಹಿಳೆಯೊಬ್ಬರು 8 ತಿಂಗಳುಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಸರ್ಕಾರದಿಂದ ನೇಮಕಗೊಂಡ ಅಥವಾ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರೂ ಅಲ್ಲ. ಹೀಗಿದ್ದರೂ ಪಿಡಿಒ ಮಂಜುನಾಥ್ ಇವರಿಂದ ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರದ ನಿಯಮಾವಳಿಯಲ್ಲಿ ಈ ರೀತಿ ಮಾಡಲು ಅವಕಾಶವಿದೆಯೇ? ಈ ಕುರಿತು ತಾ.ಪಂ.ಇಒ ಕೂಡ ಸಮರ್ಪಕವಾಗಿ ಉತ್ತರಿಸುತ್ತಿಲ್ಲವೆಂದು ದೂರಿದರು. ಡಿವೈಎಸ್‌ಪಿ ವೆಂಕಟೇಶ್ ನಿಮಗೆ ಸಹಾಯಕಿಯನ್ನು ನೇಮಿಸಿಕೊಳ್ಳಲು ಅಧಿಕಾರ ನೀಡಿದವರ‌್ಯಾರು ಎಂದು ಪಿಡಿಒ ಅವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡು, ಈ ಕುರಿತು ತನಿಖೆ ನಡೆಸಿ ಮತ್ತು ಪಿಡಿಒ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಕುರಿತು ತಮಗೆ ವರದಿ ಸಲ್ಲಿಸಲು ಇಒ ಅವರಿಗೆ ಸೂಚಿಸಿದರು. ಮಾನವ- ವನ್ಯಜೀವಿ ಸಂಘರ್ಷ ನಿಯಂತ್ರಿಸಿನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆ ಮತ್ತು ಕಾಡಾನೆಗಳ ದಾಳಿ ಅವಿರತವಾಗಿ ನಡೆಯುತ್ತಿದೆ ಎಂಬ ದೂರುಗಳು ಬಂದಿದ್ದು, ಈ ಕುರಿತು ಅರಣ್ಯ ಇಲಾಖೆ ಏನು ಕ್ರಮವಹಿಸಿದೆ ಎಂದು ಡಿವೈಎಸ್‌ಪಿ ವೆಂಕಟೇಶ್ ಆರ್‌ಎಫ್‌ಒ(ಪ್ರಾದೇಶಿಕ ವಿಭಾಗ) ನಂದಕುಮಾರ್ ಅವರನ್ನು ಪ್ರಶ್ನಿಸಿದಾಗ, ತಾಲೂಕಿನ ಕಾಡಂಚಿನ ಗ್ರಾಮಗಳಾದ ಬಿಲ್ಲೇನಹೊಸಳ್ಳಿ, ನೇರಳಕುಪ್ಪೆ, ಸಿಂಡೇನಹಳ್ಳಿ, ಕೊಳವಿಗೆ, ಶೆಟ್ಟಳ್ಳಿ ಲಕ್ಕಪಟ್ಟಣ ಮುಂತಾದ ಕಡೆಗಳಲ್ಲಿ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ಹಾಕಿರುವ ಘಟನೆ ನಡೆದಿದೆ. 4 ತಿಂಗಳ ಹಿಂದೆ ಗಿರಿಜನ ವ್ಯಕ್ತಿ ಕೂಡ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇಲಾಖೆ ಈ ಕುರಿತು ಹುಲಿಗಳ ಪತ್ತೆ ಕಾರ್ಯಕ್ಕಾಗಿ ಹುಲಿಗಳ ಚಲನವಲನಗಳನ್ನು ಗಮನಿಸುವ ಕಾರ್ಯ ನಡೆಯುತ್ತಿದೆ. ಅರಣ್ಯಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮೂಲಕ ಗುರುತಿಸಲ್ಪಟ್ಟ ಹುಲಿಗಳ ಚಲನವಲನ ದಾಖಲಾಗುತ್ತಿದೆ. ಪದೇ ಪದೆ ಕಾಡಿನಿಂದ ಹೊರಬರುತ್ತಿರುವ ಒಂದೆರಡು ಹುಲಿಗಳ ಸೆರೆಗಾಗಿ ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆಯುವ ಪ್ರಕ್ರಿಯೆ ನಡೆದಿದ್ದು, ಶೀಘ್ರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯುತ್ ಕಂಬ ತೆರವುಗೊಳಿಸಿಅತ್ತಿಕುಪ್ಪೆ ಸಿದ್ದೇಶ್ ಮಾತನಾಡಿ, ಗ್ರಾಮದ ಕೆರೆಯ ಬಳಿಯಿರುವ ವಿದ್ಯುತ್ ಕಂಬ ಅತ್ಯಂತ ದುಸ್ಥಿತಿಯಲ್ಲಿದ್ದು, ಕೆರೆಯಲ್ಲಿ ನೀರು ತುಂಬಿಕೊಂಡ ವೇಳೆ ಕಂಬ ನೆಲಕ್ಕುರುಳುವ ಸಂಭವವಿದೆ. ಈ ಕುರಿತು ಸೆಸ್ಕ್ ಅಧಿಕಾರಿಗಳಿಗೆ 6 ತಿಂಗಳಿನಿಂದ ಮಾಹಿತಿ ನೀಡುತ್ತಿದ್ದೇನೆ. ಕಂಬ ಸ್ಥಳಾಂತರಿಸುತ್ತಿಲ್ಲ. ಗ್ರಾಮದಲ್ಲಿ ಡೇರಿ ಕಟ್ಟಡಕ್ಕಾಗಿ ಗ್ರಾ.ಪಂ. ವತಿಯಿಂದ ಗುರುತಿಸಿರುವ ನಿವೇಶನವನ್ನು ಗ್ರಾ.ಪಂ.ಗೆ ಹಸ್ತಾಂತರಿಸುವ ಕಾರ್ವನ್ನು ಇಒ ಮಾಡುತ್ತಿಲ್ಲವೆಂದು ದೂರಿದಾಗ ಇಬ್ಬರೂ ಅಧಿಕಾರಿಗಳಿಗೆ ಶೀಘ್ರ ಕ್ರಮವಹಿಸಲು ಡಿವೈಎಸ್‌ಪಿ ಸೂಚಿಸಿದರು. ಮಾಹಿತಿ ಇಲ್ಲ...ಅಧಿಕಾರಿಗಳ ಗೈರುಡಿವೈಎಸ್‌ಪಿ ವೆಂಕಟೇಶ್ ಮಾತನಾಡಿ, ಹುಣಸೂರಿನಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆ ಕುರಿತು ಮಾಧ್ಯಮಗಳಲ್ಲಿ ಮಾಹಿತಿ ಬಂದಿಲ್ಲವೆಂಬ ವಿಷಯ ತಿಳಿದುಕೊಂಡಿದ್ದೇನೆ. ಈ ವಿಷಯದಲ್ಲಿ ನಮ್ಮದೂ ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು. ಇಂದಿನ ಸಭೆಯಲ್ಲಿ ಗೈರಾಗಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಗೈರಾದ ಅದಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಉಮೇಶ್, ರವಿಕುಮಾರ್, ತಹಸೀಲ್ದಾರ್ ಜೆ.ಮಂಜುನಾಥ್, ಲೋಕಾಯುಕ್ತ ಸಿಬ್ಬಂದಿ ತ್ರಿವೇಣಿ, ನಿತಿನ್, ದಿನೇಶ್, ಬಸವರಾಜ ಅರಸ್, ಮೋಹನ್‌ಕುಮಾರ್, ನಾಗೇಶ್ ಪಾಟೀಲ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. ರೈತರಿಲ್ಲ,..ದಲಿತರಿಲ್ಲ..ಸಾರ್ವಜನಿಕರೂ ಇಲ್ಲ... ಲೋಕಾಯುಕ್ತ ಕಚೇರಿಯಿಂದ ನಗರದಲ್ಲಿ ಅಹವಾಲು ಸ್ವೀಕಾರ ಸಭೆ ಇದೆ ಎನ್ನುವ ವಿಷಯ ಯಾರಿಗೂ ತಿಳಿಯದ ಕಾರಣ ಇಂದಿನ ಸಭೆಯಲ್ಲಿ ಯಾವುದೇ ಪ್ರಗತಿಪರ ಸಂಘಟನೆಗಳಾಗಲಿ, ರೈತಸಂಘಟನೆಯ ಮುಖಂಡರು, ಹೋರಾಟಗಾರರು ಯಾರೂ ಕಾಣಿಸಿಕೊಳ್ಳಲಿಲ್ಲ. ಈ ಕುರಿತು ತಮಗೆ ಮಾಹಿತಿಯೇ ಇಲ್ಲ. ನಮ್ಮನ್ನು ಕತ್ತಲಲ್ಲಿಟ್ಟು ಸಭೆ ನಡೆಸುವುದು ಯಾವ ನ್ಯಾಯ ಎಂದು ಸಂಘಟನೆಗಳ ಮುಖಂಡರು ವಿಜಯವಾಣಿಯೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.