

ಸರಗೂರು : ಪೌತಿಖಾತೆ ಮಾಡಲು ಹಣ ವಸೂಲಿ, ನೆಮ್ಮದಿ ಕೇಂದ್ರದಲ್ಲಿ ಯಾವುದೇ ಕಾರ್ಯವಾಗುತ್ತಿಲ್ಲ...ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ...ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ... ಸರ್ಕಾರಿ ಜಾಗ ಒತ್ತುವರಿ...!
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯದ ಭವನದಲ್ಲಿ ಬುಧವಾರ ಆಯೋಜಿಸಿದ್ದ ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕ ಕುಂದುಕೊರತೆಗಳ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸುರಿಸಿದ ದೂರಿನ ಸುರಿಮಳೆ.
ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿಗಳ ವಿರುದ್ಧ ಸಾರ್ವಜನಿಕರು ಹಾಗೂ ರೈತರಿಂದ ಸಾಲು ಸಾಲು ದೂರು ಸಲ್ಲಿಕೆಯಾಯಿತು.
ಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಲಂಕೆ ರಮೇಶ್ ಮಾತನಾಡಿ, ನಮ್ಮ ದೊಡ್ಡಪ್ಪನ ಹೆಸರಿನಲ್ಲಿ ಜಮೀನು ಇದೆ. ಅದರೆ ಬೇರೆಯವರಿಗೆ ಮಾಡಿಕೊಟ್ಟಿದ್ದಾರೆ. ಕಳೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೆಮ್ಮದಿ ಕೇಂದ್ರದಲ್ಲಿ ಪೌತಿಖಾತೆ ಮಾಡಲು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಣವನ್ನು ಪಡೆಯಲಾಗುತ್ತಿದೆ. ಸ್ವಾಧೀನದಲ್ಲಿದ್ದು 53 ಮತ್ತು 57 ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಚೀಟಿ ವಿತರಣೆ ಮಾಡಿಲ್ಲ ಎಂದು ದೂರಿದರು.
ದಲಿತ ಮುಖಂಡ ಶ್ರೀನಿವಾಸ ಮಾತನಾಡಿ, ಸರಗೂರು ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ. ಎಂ.ಸಿ.ತಳಲು ನುಗು ನದಿಯಿಂದ ಯಶವಂತಪುರ ಗ್ರಾಮದವರೆಗೆ ನಿರ್ಮಾಣವಾಗಿರುವ ಸಣ್ಣ ಏತ ನೀರಾವರಿ ಯೋಜನೆ ಹಾಗೂ ಬಾಲನಕಟ್ಟೆ, ಗೂಡುಕಟ್ಟೆ, ಹಾಗೂ ಎಂ.ಸಿ.ತಳಲು ಕೆರೆ ಅಭಿವೃದ್ಧಿಪಡಿಸಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಸರ್ಕಾರದ ಅನುದಾನ ನಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದರು.
ಹಾದನೂರು ಗ್ರಾಪಂ ಸದಸ್ಯ ಯಶವಂತಪುರ ಶಿವಲಿಂಗಯ್ಯ ಮಾತನಾಡಿ ಯಶವಂತಪುರ ಗ್ರಾಮದ ಜಂಜರು ಸಂಖ್ಯೆ 25, 26/1, 66/1, 99 ರ ಸರ್ಕಾರಿ ಖಾಲಿ ನಿವೇಶನಗಳು ಅಕ್ರಮವಾಗಿ ಒತ್ತುವರಿಯಾಗಿವೆ. ಅವುಗಳ ರಕ್ಷಣೆ ಮಾಡಲು ಸಿಡಿಪಿಒ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಡಿಒ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಸೂಕ್ತ ಖಾಲಿ ನಿವೇಶನ ಗುರುತಿಸಬೇಕು. ಎಲ್ಲ ಸರ್ಕಾರಿ ಖಾಲಿ ನಿವೇಶನಗಳನ್ನು ಗುರುತಿಸಿ ನಾಮಫಲಕ ಅಳವಡಿಸಬೇಕು. ನೂತನ ಕಂದಾಯ ಗ್ರಾಮದಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿಲ್ಲ. ಚರಂಡಿ ನಿರ್ಮಾಣ ಮಾಡಲು ಅಡ್ಡಿಪಡಿಸುತಿದ್ದಾರೆ ಎಂದು ದೂರಿದರು.
ಮಹೇಶ್ ಮಾತನಾಡಿ ಸರಗೂರು ಅಂಚೆ ಕಚೇರಿಯಲ್ಲಿ ಖಾತೆದಾರರಿಗೆ ಸುಮಾರು ಒಂದೂವರೆ ಕೋಟಿಯಷ್ಟು ಹಣ ವಂಚನೆ ಮಾಡಿದ್ದಾರೆ ಎಂದರು.
ದಸಂಸ (ಅಂಬೇಡ್ಕರ್ ವಾದ) ಸಂಘಟನೆ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಹಾಗೂ ಸೀರಮ್ಮ ಮಾತನಾಡಿ, ಗಿರಿಜನ ಆಶ್ರಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಎಸ್ಸಿ-ಎಸ್ಟಿ ಸಭೆಗಳಿಗೆ ಆಹ್ವಾನಿಸುತ್ತಿಲ್ಲ. ತಾಲೂಕಿನಾದ್ಯಂತ ಹಾಡಿಗಳಲ್ಲಿ ಕಳಪೆ ಕಾಮಗಾರಿಗಳ ಹಾವಳಿ ಹೆಚ್ಚಾಗುತ್ತಿದೆ. ಬಾಲ್ಯ ವಿವಾಹದ ಬಗ್ಗೆ ಅರಿವಿಲ್ಲ. ನಮ್ಮ ಹಾಡಿಜನರು ಇದರಿಂದಾಗಿ ಹೆಚ್ಚು ಜೈಲು ಪಾಲಾಗುತ್ತಿದ್ದಾರೆ. ಈ ವಿಚಾರವಾಗಿ ಹಾಡಿಗಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಆದಿವಾಸಿಗಳು ದೂರು ಸಲ್ಲಿಸಿದರು.
ಮಂಜುನಾಥ ಮಾತನಾಡಿ, ಪೋಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಹಳ್ಳಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡಲು ಸಹಕರಿಸುತ್ತಿದ್ದಾರೆ. ದೂರು ಸಲ್ಲಿಸಿದರೆ ಸ್ಥಳಕ್ಕೆ ಭೇಟಿ ನೀಡದೆ ಹಣದ ಆಮೀಷಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಯುವಜನರು ಮಹಿಳೆಯರು ಕುಡಿತದ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಲಂಚಕ್ಕಾಗಿ ಬೇಡಿಕೆ ಇಟ್ಟರೆ ತಿಳಿಸಿ: ಲೋಕಾಯುಕ್ತ ಡಿಎಸ್ಪಿ ರವಿಕುಮಾರ್ ಮಾತನಾಡಿ, ಒಟ್ಟು 46 ದೂರುಗಳು ಬಂದಿವೆ. ಈ ಎಲ್ಲ ದೂರುಗಳಿಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜವಾಬ್ದಾರಿ ವಹಿಸಿ ನಿವಾರಿಸಲು ಕ್ರಮಕೈಗೊಂಡು ವರದಿ ಮಾಡಬೇಕು. ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟಿರುವುದು ಕಂಡುಬಂದಲ್ಲಿ ಮೇಲಧಿಕಾರಿಗಳಿಗೆ ವರದಿ ಮಾಡಿ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಮೋಹನ್ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ಅಧಿಕಾರಿಗಳಾದ ವೆಂಕಟೇಶ್,ಡಿವೈಎಸ್‌ಪಿ ರವಿಕುಮಾರ್. ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ, ಡಿಎಸ್‌ಎಸ್ ಅನುಷಾ, ಗೋವಿಂದ ಕುಡುಗಿ, ಮುಖಂಡರಾದ ಮಲ್ಲೇಶ್, ಇಟ್ನ ರಾಜಣ್ಣ, ಲಕ್ಷಣ್, ಬಿಲ್ಲಯ್ಯ, ನಾಗರಾಜು ಉಯ್ಯಂಬಳ್ಳಿ, ಕೆಂಡಗಣ್ಣಸ್ವಾಮಿ, ಗ್ರಾಮೀಣಮಹೇಶ್, ಸಣ್ಣಸ್ವಾಮಿ, ಸೋಮಣ್ಣ, ಚಿನ್ನಯ್ಯ, ಶ್ರೀನಿವಾಸ್, ವಾಲ್ಮೀಕಿ ಸಿದ್ದರಾಜು, ಪ್ರಭಾಕರ್ ಇತರರು ಹಾಜರಿದ್ದರು.