ಜನಸ್ಪಂದನದಲ್ಲಿ ಅರ್ಜಿಗಳ ಮಹಾಪೂರ

IMG-20240812-WA0109
Published on

ಅರಸೀಕೆರೆ: ನಗರದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಬೆಳಗ್ಗೆ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ನಾಗರಿಕರಿಂದ ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು. ಸಭೆ ಆರಂಭವಾಗುತ್ತಲೇ ಮಾತನಾಡಿದ ಅಂಗವಿಕಲರೊಬ್ಬರು ದುಡಿದು ತಿನ್ನುವ ಶಕ್ತಿ ನನಗಿಲ್ಲ ಎನ್ನುವ ಕಾರಣದಿಂದ ಸರ್ಕಾರ ಪ್ರತಿ ತಿಂಗಳು ಮಾಶಾಸನ ನೀಡುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ನಮಗೆ ಸಕಾಲಕ್ಕೆ ಹಣ ದೊರೆಯದೇ ಪರದಾಡುವಂತಾಗಿದೆ. ತಕ್ಷಣವೇ ನೆರವಿಗೆ ಧಾವಿಸಬೇಕು ಎಂದು ಅಲವತ್ತುಕೊಂಡರು.


ಸರ್ಕಾರದ ವಿವಿಧ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿರುವ ರೈತರಿಗೆ ವಿದ್ಯುತ್ ಪರಿವರ್ತಕ ನೀಡದೇ ತೊಂದರೆ ಕೊಡಲಾಗುತ್ತಿದೆ. ಮಳೆ ಕೈ ಕೊಟ್ಟ ವೇಳೆ ಬೆಳೆ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದ್ದು, ಸೆಸ್ಕ್ ಅಧಿಕಾರಿಗಳು ಅಮಾಯಕರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇಂಧನ ಇಲಾಖೆಯ ಮಾರ್ಗಸೂಚಿ ಪಾಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು 50ಕ್ಕೂ ಹೆಚ್ಚಿನ ರೈತರು ಮನವಿ ಸಲ್ಲಿಸಿ ಸಮಸ್ಯೆ ಇತ್ಯರ್ಥಗೊಳಿಸಲು ಆಗ್ರಹಿಸಿದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಪ್ರತಿಕ್ರಿಯಿಸಿ ಯಾವ ಕಾರಣದಿಂದ ವಿಳಂಬವಾಗಿದೆ ಎನ್ನುವ ಮಾಹಿತಿ ಪಡೆದು ಲೋಪ ಸರಿಪಡಿಸುವುದಾಗಿ ಭರವಸೆ ನೀಡಿದರು.


ಗ್ರಾಮ ಪಂಚಾಯಿತಿ ನೀತಿ, ನಿಯಮಾವಳಿಗಳಿಂದ ಹಳ್ಳಿಗಳಲ್ಲಿ ಮನೆ ಕಟ್ಟಿಕೊಳ್ಳಲು ಇನ್ನಿಲ್ಲದ ಕಿರಿಕಿರಿ ಅನುಭವಿಸುವಂತಾಗಿದೆ. ಆಶ್ರಯ ಮನೆಗಳ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದ್ದು, ಎಲ್ಲವೂ ಉಳ್ಳವರ ಪಾಲಾಗುತ್ತಿವೆ. ನಿವೇಶನ ಇಲ್ಲದವರಿಗೆ ಅವಕಾಶ ಕಲ್ಪಿಸಬೇಕು.ಹಕ್ಕು ಪತ್ರ, ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿದ್ದರೂ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಸ್ಪಷ್ಟವಾಗಿ ಉತ್ತರಿಸಬೇಕು ಎಂದು ಆಶ್ರಯ ನಿವೇಶನ ಕೋರಿದ್ದ ನೂರಾರು ಆಕಾಂಕ್ಷಿಗಳು ಸಭೆಗೆ ಲಿಖಿತ ರೂಪದಲ್ಲಿ ದೂರು ನೀಡಿದರು.


ತಾಲೂಕು ಪಂಚಾಯಿತಿ ಇಒ ನಾಗರಾಜ್ ಮಾತನಾಡಿ, ಯಾವ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ತೊಂದರೆಯಾಗಿದೆ ಎನ್ನುವುದರ ಕುರಿತು ಸಂಬಂಧಿಸಿದ ಪಿಡಿಒಗಳಿಂದ ಮಾಹಿತಿ ಪಡೆದು ತೊಂದರೆಗಳು ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಜನಸ್ಪಂದನ ಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರು ಇನ್ನೂರಕ್ಕೂ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಒಟ್ಟಾರೆ 350 ಕ್ಕೂ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net