

ಮುಧೋಳ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಕುಂಭದ್ರೋಣ ಮಳೆಯಿಂದಾಗಿ ಮುಧೋಳ-ಯಾದವಾಡ ಸೇತುವೆ ಮೇಲೆ ಘಟಪ್ರಭೆ ಉಕ್ಕಿ ಹರಿಯುತ್ತಿದ್ದಾಳೆ. ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡು ಜನರು ಸುತ್ತುವರಿದು ಸಂಚರಿಸುವಂತಾಗಿದೆ.
ಉತ್ತೂರ, ಮಿರ್ಜಿ, ಮಾಲಾಪುರ, ಒಂಟಗೋಡಿ, ರಂಜಣಗಿ, ಗುಲಗಾಲ ಜಂಬಗಿ, ಮೆಟಗುಡ್ಡ, ಯಾದವಾಡ ಸೇರಿ 23ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಿರಣ್ಯಕೇಶಿಯಲ್ಲಿ 49070, ಮಾರ್ಕಂಡೇಯ 5543, ಬಳ್ಳಾರಿ ನಾಲಾದಲ್ಲಿ 2221 ಕ್ಯೂಸೆಕ್ ಸೇರಿ ಘಟಪ್ರಭೆಯಲ್ಲಿ 57 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಶುಕ್ರವಾರ ಸಂಜೆ ವೇಳೆ ಮತ್ತಷ್ಟು ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇದೆ.
ಮುಧೋಳದ ಯಾದವಾಡ ಸೇತುವೆ ಮೇಲೆ ಘಟಪ್ರಭಾ ನದಿ ಪ್ರವಾಹ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಸಂಗಪ್ಪ ಎಂ.ಹಾಗೂ ಅಧಿಕಾರಿಗಳು ಪರಿಶೀಲಿಸಿದರು. ಈಗಾಗಲೇ ತಾಲೂಕಿನ 11 ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ನೂರಾರು ಕೃಷಿ ಪಂಪ್‌ಸೆಟ್‌ಗಳು ನೀರಿನಲ್ಲಿದ್ದು, ಕೆಲವು ನೀರಿನ ರಭಸಕ್ಕೆ ಹರಿದುಕೊಂಡು ಹೋಗಿವೆ.
ಮಿರ್ಜಿ ಗ್ರಾಮಕ್ಕೆ ನೀರು ನುಗ್ಗಿದ್ದು, 20 ಕುಟುಂಬಗಳ 79 ಜನರನ್ನು ಕಾಳಜಿ ಕೇಂದ್ರದಲ್ಲಿ ರಕ್ಷಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಾಲೂಕಿನ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಹಾಗೂ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಮನವಿ ಮಾಡಿದ್ದಾರೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಕಬ್ಬು, ಗೋವಿನ ಜೋಳ, ಈರುಳ್ಳಿ ಬೆಳೆ ನಾಶವಾಗಿವೆ. ಕಳೆದ ವರ್ಷ ಬೆಳೆ ಪರಿಹಾರ ಬಂದಿದ್ದು, ಮಳಲಿ ಗ್ರಾಮದ ನದಿ ಪಾತ್ರದ ನೂರಾರು ಎಕರೆ ಜಮೀನುಗಳಿಗೆ ಪರಿಹಾರ ಬಂದಿಲ್ಲ ಎಂದು ಮಳಲಿ ಗ್ರಾಮಸ್ಥರು ವಿಜಯವಾಣಿ ಎದುರು ದೂರಿದರು.
ಮೂರು ಕಾಳಜಿ ಕೇಂದ್ರ ಸ್ಥಾಪನೆ: ನಗರದ ಎಂ.ಕೆ.ಜಿ.ಎಸ್., ಸಿದ್ಧರಾಮೇಶ್ವರ ನಗರ, ರನ್ನ ಶಾಲೆ ಹಾಗೂ ಮಿರ್ಜಿಯಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.