

ಮೈಸೂರು: ಕನ್ನಡ ರಂಗಭೂಮಿ ಹಾಗೂ ಸಾಂಸ್ಕೃತಿಕ ಲೋಕ ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಜನರನ್ನು ಸೆಳೆದುಕೊಳ್ಳುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು.
ಸಂಚಲನ ಮೈಸೂರು, ಡ್ರೀಮ್ ಬಜ್ಹ್ ಫೌಂಡೇಷನ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪ್ರವಾಸೋದ್ಯಮ ಇಲಾಖೆಯಿಂದ ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಸೋಮವಾರದಿಂದ ಆರಂಭಗೊಂಡ ಐದು ದಿನಗಳ ಸಂಚಲನ ಮಕ್ಕಳ ನಾಟಕೋತ್ಸವ-ಜಾನಪದ ಉತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ದೇಶದಲ್ಲಿ ಯುವಕರ ಸಂಖ್ಯೆ ಅಧಿಕವಾಗಿದ್ದು, ಅವರಲ್ಲಿ ಬಹಳಷ್ಟು ಮಂದಿ ರಂಗಭೂಮಿಯತ್ತ ತೊಡಗಿಸಲು ಮುಂದಾಗುತ್ತಿರುವ ಶುಭ ಸಂಕೇತವಾಗಿದೆ. ಇದರಿಂದ ಕನ್ನಡ ರಂಗಭೂಮಿ, ಸಾಂಸ್ಕೃತಿಕ ಲೋಕ ಮಕ್ಕಳು ಮತ್ತು ಯುವಜನರನ್ನು ಸೆಳೆದುಕೊಳ್ಳುತ್ತಿರುವುದರಿಂದ ರಂಗ ಭೂಮಿಗೆ ಹೊಸ ಮುಖಗಳಿಂದ ಮತ್ತಷ್ಟು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಮೈಸೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಎಂ.ಎಸ್.ಸಪ್ನಾ ಮಾತನಾಡಿ, ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿಯ ಚಟುವಟಿಕೆಗಳು ಸಹಕಾರಿ. ಆದರೆ ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅವರಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಮಾಡಬೇಕಾಗಿದೆ. ಪ್ರಸ್ತುತ ಯುವಕರು ತಂತ್ರಜ್ಞಾನ ಬಳಕೆಯಲ್ಲಿ ನಿಪುಣರಿದ್ದಾರೆ ಎಂದರು.
ಪದವಿ ಪೂರೈಸಿದ ತಕ್ಷಣ ಶಿಕ್ಷಣ ಸಿಕ್ಕಿದಂತೆ ಎಂದು ಭಾವಿಸುವುದು ಸರಿಯಲ್ಲ. ಪದವಿ ಪತ್ರ ಪಡೆದ ಅದರಾಚೆಗೂ ಕಲಿಕೆ ಇದೆ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬೌದ್ಧಿಕ ವಿಕಸನಕ್ಕೆ ಸಹಕಾರಿ. ಈ ಹಿಂದೆ ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲಿ ಸಂವಹನ ಕ್ಷೇತ್ರ ಸವಾಲಿನಿಂದ ಕೂಡಿತ್ತು. ಈಗ ಸಂವಹನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಲ್ಲಿನ ಕೀಳರಿಮೆ ಹೋಗಲಾಡಿಸಲು ಸಮಾಜ ಹಾಗೂ ಪಾಲಕರ ಪ್ರೇರಣೆ ಬೇಕಾಗುತ್ತದೆ. ಮಕ್ಕಳನ್ನು ಕೇವಲ ತಂತ್ರಜ್ಞಾನಕ್ಕೆ ಸಿಮೀತಗೊಳಿಸಬಾರದು ಎಂದು ಸಲಹೆ ನೀಡಿದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಡ್ರೀಮ್ ಬಜ್ಹ್ ಫೌಂಡೇಶನ್‌ನ ಸಂಯೋಜನಾಧಿಕಾರಿ ಎಂ.ಪಿ. ಪೂಜಾ, ಸಂಚಲನ ಸಂಸ್ಥೆಯ ಅಧ್ಯಕ್ಷ ದೀಪಕ್ ಮೈಸೂರು, ಉತ್ಸವದ ಸಂಯೋಜಕ ತ್ಯಾಗರಾಜು ಇತರರು ಇದ್ದರು. ಆಯಾಮ ಅಕಾಡೆಮಿ ವಿದ್ಯಾರ್ಥಿಗಳಿಂದ ದೇಸಿ ವೈಭವ ಹಾಗೂ ಭಾರತೀಯ ವಿವಿಧ ಜನಪದ ನೃತ್ಯ ಕಾರ್ಯಕ್ರಮ ನಡೆಯಿತು.