

ಹುಬ್ಬಳ್ಳಿ : ಪಾಕಿಸ್ತಾನದ ಉಗ್ರರ ತಾಣಗಳಲ್ಲಿ ಏರ್ ಸ್ಟ್ರೈಕ್ ಮಾಡುವ ಮೂಲಕ ಉಗ್ರರಿಗೆ ಭಾರತ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಸೈನ್ಯ ಮತ್ತು ನಾಗರಿಕ ಪ್ರದೇಶಗಳಿಗೆ ಹಾನಿ ಮಾಡದೆ, ಪಹಲ್ಗಾಮ್ ನಲ್ಲಿ ದಾಳಿ ನಡೆಸಿ 26 ಭಾರತೀಯ ಅಮಾಯಕ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ ಉಗ್ರರರಿಗೆ ನಮ್ಮ ದೇಶ ‘ಆಪರೇಷನ್ ಸಿಂಧೂರ್‘ದ ಮೂಲಕ ಪ್ರತ್ಯುತ್ತರ ನೀಡಿ, ಪ್ರತಿಕಾರ ತೀರಿಸಿಕೊಂಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಉಗ್ರ ಸಂಘಟನೆ ಹಾಗೂ ಅವುಗಳಿಗೆ ನೆಲೆಯಾಗಿರುವ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ದೊರೆತಿದೆ. ದೇಶವಾಸಿಗಳ ಕೋರಿಕೆ ಈಡೇರಿದೆ ಎಂದು ಶೆಟ್ಟರ್ ಸಂತಸ ವ್ಯಕ್ತಪಡಿಸಿದರು.
ನಾವು ಸಹ ಶಾಂತಿ ಬಯಸುತ್ತೇವೆ. ಆದರೆ, ದುಷ್ಟತನದ ಮುಂದೆ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ದೇಶದ ಹೆಮ್ಮೆಯ ಸೈನಿಕರು ತೋರಿಸಿಕೊಟ್ಟಿದ್ದಾರೆ. ಅವರಿಗೆ ದೊಡ್ಡ ಸಲಾಂ. ಸೈನಿಕರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇಂತಹ ಕಾರ್ಯುಚರಣೆ ನಡೆದಿರುವುದು ಅವರ ಸಮರ್ಥ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಸೈನ್ಯಕ್ಕೆ ಅವರು ನೀಡುವ ಬೆಂಬಲ, ಸೈನಿಕರ ಮೇಲೆ ಅವರಿಗಿರುವ ನಂಬಿಕೆ, ಅವರು ನೀಡಿದ ಪ್ರೋತ್ಸಾಹ ಎಲ್ಲವೂ ಶ್ಲಾಘನೀಯ. ಮೋದಿಯವರನ್ನು ಹೊರತು ಪಡಿಸಿ ಇನ್ನಾರಿಗೂ ಈ ಕಾರ್ಯ ಮಾಡಲು ಆಗುತ್ತಿರಲಿಲ್ಲ. ನಮ್ಮ ಸೈನಿಕರ ಶೌರ್ಯ ಹಾಗೂ ಸಮರ್ಪಣಾ ಭಾವಕ್ಕೆ ನಾನು ಸದಾ ಚಿರಋಣಿ ಎಂದು ಹೇಳಿದ್ದಾರೆ.
ಇದೇ ರೀತಿ ಪಾಕಿಸ್ತಾನ ಭಯೋತ್ಪಾದಕರಿಗೆ ಸಹಾಯ ಮಾಡಿದರೆ ಅವರಿಗೂ ತಕ್ಕ ಉತ್ತರ ನೀಡಲಾಗುತ್ತದೆ, ಓಲೈಕೆ ರಾಜಕಾರಣ ಮಾಡುತ್ತ್ತ ಬಂದಿರುವ ಕಾಂಗ್ರೆಸ್ ಶಾಂತಿ ಮಂತ್ರ ಜಪಿಸುತ್ತ ಕುಳಿತಿರಲಿ. ದೇಶಭಕ್ತಿಯೇ ಇಲ್ಲದಿರುವ ಕಾಂಗ್ರೆಸ್ನವರಿಂದ ಇನ್ನಾವರೀತಿಯ ಪ್ರತಿಕ್ರಿಯೆ ಬಯಸಲು ಸಾಧ್ಯ? ಎಂದು ವ್ಯಂಗ್ಯವಾಡಿದ್ದಾರೆ.
ಟ್ವೀಟ್ ಮೂಲಕ ಶಾಂತಿಯ ಪಾಠಮಾಡಿದ ಕಾಂಗ್ರೆಸ್ನವರಿಗೆ ವ್ಯಾಪಕ ಟೀಕೆಗಳು ಬಂದ ನಂತರ ಅದನ್ನು ಡಿಲಿಟ್ ಮಾಡಿದ್ದಾರೆ. ದೇಶದ ಸುರಕ್ಷತೆಗಿಂತ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮುಖ್ಯವಾಗಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.