ಸಿಬ್ಬಂದಿ ಮೇಲೆ ಉದ್ಯಮಿ ಹಾರಿಸಿದ ಗುಂಡು ಗುರಿ ತಪ್ಪಿ ಮಗನ ಪ್ರಾಣವನ್ನೇ ತೆಗೆಯಿತು!

shootout case
Published on

ಮಂಗಳೂರು: ನಗರದ ಮೋರ್ಗನ್ಸ್​ಗೇಟ್​ನಲ್ಲಿ ಉದ್ಯಮಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಸಿಬ್ಬಂದಿ ಮೇಲೆ ಪಿಸ್ತೂಲಿನಿಂದ ಹಾರಿಸಿದ ಗುಂಡು ಗುರಿತಪ್ಪಿ ಪುತ್ರನ ತಲೆ ಹೊಕ್ಕಿದ್ದ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಉದ್ಯಮಿ ಪುತ್ರ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.

ಮೋರ್ಗನ್ಸ್​ಗೇಟ್​ನ ವೈಷ್ಣವಿ ಎಕ್ಸ್​ಪ್ರೆಸ್ ಕಾಗೋ ಸಂಸ್ಥೆ ಮಾಲೀಕ ರಾಜೇಶ್ ಪ್ರಭು ಅವರ ಪುತ್ರ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸುಧೀಂದ್ರ(16) ಮೃತ ದುರ್ದೈವಿ. ತಂದೆ ರಾಜೇಶ್​ ಪ್ರಭು ಮಂಗಳವಾರ(ಸೆ.5) ಕೆಲಸದವರ ಜತೆ ಮಾತಿನ ಚಕಮಕಿ ನಡೆದ ಸಂದರ್ಭದಲ್ಲಿ ಸಿಬ್ಬಿಂದಿ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರು. ಗುರಿ ತಪ್ಪಿ ಪುತ್ರನ ತಲೆಗೆ ಬಿದ್ದಿತ್ತು. ಮರುದಿನ ಮಿದುಳು ನಿಷ್ಕ್ರಿಯಗೊಂಡಿತ್ತು. ಈ ನಡುವೆ ರಾಜೇಶ್ ಎದೆನೋವಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದ. ಶುಕ್ರವಾರ ಬೆಳಗ್ಗೆ ಸುಧೀಂದ್ರ ಮೃತಪಟ್ಟಿದ್ದಾನೆ. ಪೊಲೀಸರು ಬಾಲಕನ ತಂದೆಯನ್ನ ಬಂಧಿಸಿದ್ದಾರೆ.

ಸೆ.5ರಂದು ಆಗಿದ್ದೇನು?: ಸಂಸ್ಥೆಯ ಇಬ್ಬರು ಕಾರ್ವಿುಕರಾದ ಚಂದ್ರು ಮತ್ತು ಆಶ್ರಫ್ ಚಾಲಕ ಮತ್ತು ಕ್ಲೀನರ್ ಆಗಿ, ಸರಕು ಸಾಗಾಟ ವಾಹನದಲ್ಲಿ ಒಂದು ಟ್ರಿಪ್ ಹೋಗಿ ಬಂದಿದ್ದರು. ಸಾಯಂಕಾಲ ತಮ್ಮ ಎರಡು ದಿನದ ವೇತನವಾಗಿ 4 ಸಾವಿರ ರೂ.ವನ್ನು ಕಚೇರಿಯಲ್ಲಿದ್ದ ರಾಜೇಶ್ ಪ್ರಭು ಅವರ ಪತ್ನಿ ಬಳಿ ಕೇಳಿದಾಗ ವಾಗ್ವಾದ ನಡೆದಿತ್ತು.

ಆಕೆ ಮನೆಗೆ ಕರೆ ಮಾಡಿ ಮಗನಿಗೆ ಬರುವಂತೆ ತಿಳಿಸಿದ್ದು, ಆತನೊಂದಿಗೆ ರಾಜೇಶ್ ಪ್ರಭು ಕೂಡ ಬಂದಿದ್ದ. ಈ ವೇಳೆ ಮಗ ಸುಧೀಂದ್ರ ಆ ಇಬ್ಬರು ಸಿಬ್ಬಂದಿಯ ಮೇಲೂ ಕೈ ಮಾಡಿದ್ದು, ಸ್ಥಳದಲ್ಲಿ ಗೊಂದಲ ಉಂಟಾಗಿತ್ತು. ಕೋಪಗೊಂಡ ರಾಜೇಶ್, ತನ್ನಲ್ಲಿದ್ದ ಪಿಸ್ತೂಲ್ ತೆಗೆದು ಎರಡು ಸುತ್ತು ಗುಂಡು ಹಾರಿಸಿದ್ದು, ಸಿಬ್ಬಂದಿ ಬಚಾವಾಗಿದ್ದಾರೆ. ಅದರಲ್ಲಿ ಒಂದು ಗುಂಡು ಅಲ್ಲೇ ಕುಳಿತ್ತಿದ್ದ ಪುತ್ರನ ತಲೆಯ ಹಿಂಭಾಗಕ್ಕೆ ತಗುಲಿದೆ. ಬಾಲಕನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿತ್ತು.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ಉದ್ಯಮಿ ವಿರುದ್ಧ ಮಂಗಳೂರು ದಕ್ಷಿಣ(ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಪರವಾನಗಿ ಹೊಂದಿರುವ ಪಿಸ್ತೂಲ್: ರಾಜೇಶ್ ಪ್ರಭು ಪರವಾನಗಿ ಹೊಂದಿರುವ ಪಾಯಿಂಟ್ 32 ಬೋರ್ ಪಿಸ್ತೂಲ್ ಇಂಡಿಯನ್ ಮೇಡ್ ಪಿಸ್ತೂಲ್ ಹೊಂದಿದ್ದು, 2022ರ ಜುಲೈ 31ರ ವರೆಗೆ ಪರವಾನಗಿ ಇದೆ. ಸ್ಥಳದಲ್ಲಿ ಗುಂಡು ಹಾರಿಸಿರುವ ಅವಶೇಷ ಪತ್ತೆಯಾಗಿದೆ. ಗುಂಡು ಬಾಲಕನ ಎಡಕಣ್ಣಿನ ಭಾಗದಲ್ಲಿ ತಾಗಿಕೊಂಡು ಹೋಗಿದ್ದು, ಸುಮಾರು 7-8 ಸೆಂ.ಮೀ.ನಷ್ಟು ತಲೆ ಭಾಗಕ್ಕೆ ಹೊಕ್ಕಿತ್ತು. ಕೋಮಾಗೆ ತಲುಪಿದ್ದ ಉದ್ಯಮಿ ಪುತ್ರ ಶುಕ್ರವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net