

ತುಮಕೂರು: ಅಪ್ಪ-ಅಮ್ಮ ವಾಸವಿದ್ದ ಮನೆಗೆ ಬೆಂಕಿ ಹಚ್ಚಿದ್ದ ಮಗನಿಗೆ 8 ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ತಿಪಟೂರು ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ಆದೇಶಿಸಿದೆ.
2019ರ ಮಾರ್ಚ್ 14ರಂದು ಬೆಳಗಿನ ಜಾವ ತುರುವೇಕೆರೆ ತಾಲೂಕಿನ ಬೀಚನಹಳ್ಳಿಯಲ್ಲಿ ತೋಟದ ಸೋಗೆಯ ಮನೆಯಲ್ಲಿ ಸಣ್ಣಹುಚ್ಚಯ್ಯ ಮತ್ತು ಪತ್ನಿ ಇಬ್ಬರೂ ಇದ್ದರು. ಈ ವೇಳೆ ಸಣ್ಣಹುಚ್ಚಯ್ಯ ಅವರ ಮಗ ಶಂಕರಪ್ಪ ತನ್ನ ತಂದೆ-ತಾಯಿ ವಾಸವಿದ್ದ ಮನೆಗೇ ಬೆಂಕಿ ಹಚ್ಚಿ ಎಂಬ ಪರಾರಿಯಾಗಿದ್ದ. ಸೋಗೆ ಉರಿಯುವ ಶಬ್ದಕ್ಕೆ ಎಚ್ಚರಗೊಂಡು ದಂಪತಿ ಮನೆಯಿಂದ ಹೊರಗಡೆ ಬಂದಿದ್ದರಿಂದ ಅಪಾಯದಿಂದ ಪಾರಾಗಿದ್ದರು. ಮನೆಯಲ್ಲಿದ್ದ ತೆಂಗಿನಕಾಯಿ, ರಾಗಿ, ನಗದು ಸೇರಿದಂತೆ ಹಲವು ವಸ್ತು ಸುಟ್ಟು ಬೂದಿಯಾಗಿದ್ದವು. ಈ ಬಗ್ಗೆ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ ತಂದೆ ದೂರು ನೀಡಿದ್ದರು.
ಸಿಪಿಐ ಮೊಹಮ್ಮದ್ ಸಲೀಂ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಶಿವಕುಮಾರ್ ಅವರು ಅಪರಾಧಿಗೆ 8 ವರ್ಷ ಕಠಿಣ ಸಜೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಆಸ್ತಿ ವಿಚಾರಕ್ಕೆ ಕಲಹ ಉಂಟಾಗಿದ್ದರಿಂದ ತಂದೆ-ತಾಯಿ ಇದ್ದ ಮನೆಗೆ ಮಗ ಬೆಂಕಿ ಹಚ್ಚಿದ್ದ.