

ಮೈಸೂರು: ರಂಗಾಯಣ ಆವರಣದಲ್ಲಿ ಮಳೆ ನೀರಿನಲ್ಲಿ ಚಿಣ್ಣರ ಚಿನ್ನಾಟದ ಬೆನ್ನಲ್ಲೇ ಸಂಭವಿಸಿತು ಬೆಂಕಿ ಅನಾಹುತ..!
ಚಿಣ್ಣರಮೇಳ-2024ರ ಮಕ್ಕಳ ರಂಗ ತರಬೇತಿ ಶಿಬಿರವು ಶನಿವಾರ ಸಂಜೆ ಇದಕ್ಕೆ ಸಾಕ್ಷಿ ಆಯಿತು. ಆತಂಕಗೊಳ್ಳಬೇಡಿ. ಇದು ನೈಜವಲ್ಲ. ಇದು ಕಲ್ಪತವಷ್ಟೇ.!
ಅಗ್ನಿ ನಂದಿಸುವ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ಕಲ್ಪಿತ ಪ್ರದರ್ಶನ ನಡೆಯಿತು. ಅದಕ್ಕಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಪ್ರಾತ್ಯಕ್ಷಿಕೆ ನೀಡಲಾಯಿತು. ಹೀಗಾಗಿ, ಮಕ್ಕಳಲ್ಲಿ ಭಯ ಇರಲಿಲ್ಲ. ಬದಲಿಗೆ ಜಾಗೃತಿ ಮೂಡಿತು.
ಅಗ್ನಿ ಶಾಮಕ ವಾಹನದಿಂದ ನೀರಿನ ಸಿಂಚನವಾಯಿತು. ಇದರಿಂದ ಉಂಟಾದ ಕೃತಕ ಮಳೆಯಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದರು.
ನಾಟಕ, ನೃತ್ಯ, ಹಾಡು, ರಂಗಗೀತೆ, ಜಾನಪದ ಕಲಿಯುತ್ತಿದ್ದ ಶಿಬಿರಾರ್ಥಿಗಳು ಜಲಕ್ರೀಡೆಯಲ್ಲಿ ಮೈಮರೆತು ನಲಿದರು. ತದನಂತರ ಬೆಂಕಿ ಅನಾಹುತ ತಡೆ ಕುರಿತು ಮಾಹಿತಿ ನೀಡಲಾಯಿತು. ಅದಕ್ಕಾಗಿ ಮಕ್ಕಳ ಮುಂದೆ ಬೆಂಕಿ ಹಚ್ಚಿ, ಅದನ್ನು ನಂದಿಸುವ ಕೆಲಸವನ್ನೂ ಮಾಡಲಾಯಿತು.
ಅಗ್ನಿ ಅವಘಡವನ್ನು ಹೇಗೆ ನಂದಿಸಬೇಕು, ಹೇಗೆ ನಿರ್ವಹಣೆ ಮಾಡಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದರು. ಮಕ್ಕಳು ಆಸಕ್ತಿಯಿಂದ ಆಲಿಸಿದರು.