

ಬೆಂಗಳೂರು: ನಗರದ ಶೇಷಾದ್ರಿಪುರ ಬಳಿ ಸಿಗ್ನಲ್ ಜಂಪ್ ಮಾಡಿದ ಸಂಚಾರ ಪೊಲೀಸರ ಟೋಯಿಂಗ್ ವಾಹನಕ್ಕೆ ಪೊಲೀಸರೇ ಅನಿವಾರ್ಯವಾಗಿ ದಂಡ ವಿಧಿಸಿದ ಘಟನೆ ನಡೆದಿದೆ.
ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿದ ವಾಹನಗಳನ್ನ ಟೋ ಮಾಡಿಕೊಂಡು ತೆರಳುತ್ತಿದ್ದ ಟೋಯಿಂಗ್ ವಾಹನಕ್ಕೆ ಸಿಗ್ನಲ್ ಗ್ರೀನ್ ಬೀಳುವವರೆಗೂ ಕಾಯುವ ತಾಳ್ಮೆ ಇರಲಿಲ್ಲ. ಅಥವಾ "ನಾವೇ ಇನ್ನೊಬ್ಬರ ವೆಹಿಕಲ್ ಹಿಡಿಯುವವರು, ನಮ್ಮನ್ನು ಯಾರು ಕೇಳ್ತಾರೆ" ಎಂಬ ಅಹಂಕಾರ ಇರಬಹುದು. ಒಟ್ಟಿನಲ್ಲಿ ಟೋಯಿಂಗ್ ವಾಹನದ ಚಾಲಕ ರೆಡ್ ಸಿಗ್ನಲ್ ಜಂಪ್ ಮಾಡೇ ಬಿಟ್ಟ.
ಈ ದೃಶ್ಯವನ್ನು ಪಕ್ಕದಲ್ಲೇ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ವಿಡಿಯೋ ಮಾಡಿದ್ದಾರೆ. ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ನೆಟ್ಟಿಗರು ಈ ಟೋಯಿಂಗ್ ವಾಹನದ ಚಾಲಕನ ಕೃತ್ಯವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚರಗೊಂಡ ಬೆಂಗಳೂರು ಪೊಲೀಸರು ಕೂಡಲೇ ಆ ಟೋಯಿಂಗ್ ವಾಹನಕ್ಕೆ 500 ರೂ. ದಂಡ ವಿಧಿಸಿದ್ದಾರೆ.
ಆದರೆ ಇಷ್ಟಕ್ಕೇ ಸುಮ್ಮನಾಗದ ನೆಟ್ಟಿಗರು, "ಈ ವಾಹನದಲ್ಲಿ ಮುಂದೆ ಚಾಲಕನ ಪಕ್ಕದಲ್ಲಿ ಸಬ್ ಇನ್ಸ್‌ಪೆಕ್ಟರ್ ಅಥವಾ ಬೇರೆ ಅಧಿಕಾರಿ ಇರಲಿಲ್ಲವೇ? ಅವರದೂ ತಪ್ಪಿಲ್ಲವೇ? ಅವರನ್ನೇಕೆ ಸಸ್ಪೆಂಡ್ ಮಾಡಿಲ್ಲ" ಎಂದು ನಾನಾ ರೀತಿಯಲ್ಲಿ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.