ಬಟ್ಟೆ ವ್ಯಾಪಾರಿಗೆ 51 ಸಾವಿರ ರೂ. ದಂಡ

law-4617873_1920
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸೇವಾ ನ್ಯೂನತೆ ಎಸಗಿದ ಮಹಾರಾಷ್ಟ್ರ ನಾಗಪುರ ಹೊಸೈರಿನ ಬಟ್ಟೆ ವ್ಯಾಪಾರಿಗೆ 51 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಗ್ರಾಹಕರ ಆಯೋಗ ಶನಿವಾರ ಆದೇಶ ಹೊರಡಿಸಿದೆ.
ಧಾರವಾಡ ಗುಲಗಂಜಿಕೊಪ್ಪ ಜನತಾ ಪ್ಲಾಟ್‌ನ ನೂರುಲ್ಲಾ ಎಂಬುವವರು ಮಹಾರಾಷ್ಟ್ರದ ನಾಗಪುರ ಹೊಸೈರಿನ ಹೋಲ್‌ಸೇಲ್ ಬಟ್ಟೆ ಅಂಗಡಿಯಿಂದ 2022ರ ಅ. 18ರಂದು 16,388 ರೂ. ಮೊತ್ತದ ರೆಡಿಮೇಡ್ ಬಟ್ಟೆಗಳನ್ನು ಖರೀದಿಸಿ ಹಣ ಸಹ ಸಂದಾಯ ಮಾಡಿದ್ದರು. ಬಟ್ಟೆಗಳನ್ನು ಕೋರಿಯರ್ ಮೂಲಕ ಕಳುಹಿಸುವುದಾಗಿ ವ್ಯಾಪಾರಿ ತಿಳಿಸಿದ್ದ. ಆದರೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಟ್ಟೆ ಕಳಿಸಿರಲಿಲ್ಲ. ಹೀಗಾಗಿ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಂದು 2023ರ ಫೆ. 23ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ನೂರುಲ್ಲಾ ಬಟ್ಟೆ ಅಂಗಡಿಯವರಿಗೆ ಹಣ ಸಂದಾಯ ಮಾಡಿದ ದಾಖಲೆಗಳಿವೆ. ಆದರೆ ಬಟ್ಟೆ ಕಳುಹಿಸದೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳಲ್ಲಿ ದೂರುದಾರ ಸಂದಾಯ ಮಾಡಿದ 16,388 ರೂ. ಮತ್ತು 18-10-2022 ರಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ವ್ಯಾಪಾರಿಗೆ ಆದೇಶಿಸಿದೆ. ದೂರುದಾರಿಗೆ ಆಗಿರುವ ಅನನುಕೂಲ ಮತ್ತು ಮಾನಸಿಕ ತೊಂದರೆಗೆ 25,000 ರೂ. ಪರಿಹಾರ ಹಾಗೂ 10,000 ರೂ. ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತೀರ್ಪಿನಲ್ಲಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net