ಮುರುಘೇಂದ್ರ ಶ್ರೀಗೆ ಅಂತಿಮ ನಮನ

19Athani1C
Published on

ಅಥಣಿ: ಲಿಂಗೈಕ್ಯರಾದ ಸಮೀಪದ ಬಿಳ್ಳೂರು ವಿರಕ್ತಮಠದ ಪೀಠಾಧಿಪತಿ ಮುರುಘೇಂದ್ರ ಸ್ವಾಮೀಜಿ (73) ಅಂತ್ಯಕ್ರಿಯೆ ಭಾನುವಾರ ನೆರವೇರಿತು.

ವಯೋಸಹಜವಾಗಿ ಶ್ರೀಗಳು ಶನಿವಾರ ಲಿಂಗೈಕ್ಯರಾಗಿದ್ದರು. ಶ್ರೀ ಮಠದ ಆವರಣದಲ್ಲಿ ವೀರಶೈವ ಲಿಂಗಾಯತ ಪರಂಪರೆಯ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಬಸವ ಕ್ರಿಯಾ ಸಮಾಧಿಯಲ್ಲಿ ಮುರುಘೇಂದ್ರ ಸ್ವಾಮೀಜಿ ಅಂತ್ಯಕ್ರಿಯೆ ಜರುಗಿತು. ಮುರುೇಂದ್ರ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಸಾರೋಟಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶ್ರೀಮಠದ ಆವರಣಕ್ಕೆ ಕರೆತರಲಾಯಿತು. ಸರಳ ಹಾಗೂ ಸಾತ್ವಿಕ ಸ್ವಭಾವದ ಶ್ರೀಗಳನ್ನು ಕಳೆದುಕೊಂಡ ಭಕ್ತರು ಮುಮ್ಮಲ ಮರಗಿ, ಭಕ್ತಿಯ ವಿದಾಯ ಸಲ್ಲಿಸಿದರು.

ವಿವಿಧ ಪೂಜ್ಯರು ಭಾಗಿ: ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ನಿಡಸೋಸಿ ಸಿದ್ದಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಗಚ್ಚಿನಮಠದ ಶಿವಬಸವ ಸ್ವಾಮೀಜಿ, ನದಿ ಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ, ಶೇಗುಣಿಸಿಯ ಡಾ.ಮಹಾಂತ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ತೆಲಸಂಗದ ವೀರೇಶ್ವರ ದೇವರು, ಸ್ಥಳೀಯ ಸಿದ್ದಲಿಂಗ ಸ್ವಾಮೀಜಿ ಭಾಗಿಯಾಗಿದ್ದರು.

ಅಂತಿಮ ದರ್ಶನ: ಸಚಿವ ಶಿವಾನಂದ ಪಾಟೀಲ, ಶಾಸಕರಾದ ಲಕ್ಷ್ಮಣ ಸವದಿ, ಜಗದೀಶ ಗುಡಗುಂಟಿಮಠ ಸೇರಿ ವಿವಿಧ ಗಣ್ಯರು, ಸ್ವಾಮೀಜಿ ಅಂತಿಮ ದರ್ಶನ ಪಡೆದರು. ಬಾಗಲಕೋಟೆ, ಬಸವನ ಬಾಗೇವಾಡಿ, ವಿಜಯಪುರ, ಸಿಂದಗಿ, ಸಂಕ, ಅಥಣಿ, ಗೋಕಾಕ, ಚಿಕ್ಕೋಡಿ, ರಾಯಬಾಗ, ಬೆಳಗಾವಿ, ನಿಪ್ಪಾಣಿ, ಜಮಖಂಡಿ, ತಿಕೋಟಾ ಸೇರಿ ವಿವಿಧೆಡೆಯಿಂದ ಆಗಮಿಸಿದ ಸಹಸ್ರಾರು ಭಕ್ತರು ಸ್ವಾಮೀಜಿಗೆ ಭಕ್ತಿನಮನ ಸಲ್ಲಿಸಿದರು. ಎಲ್ಲ ಭಕ್ತರಿಗೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net