

ರಾಣೆಬೆನ್ನೂರ: ಅಚ್ಚುಮೆಚ್ಚಿನ ಗೆಳೆಯನ ಸಾವನ್ನು ಮರೆಯಲು ತಂದ ಫೈಟರ್ ಟಗರು ಮಂಗಳವಾರ ಅಖಾಡದಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರವನ್ನು ಮಾಲೀಕ ನೆರವೇರಿಸಿದ್ದಾರೆ. ಅಲ್ಲದೆ, ಅದರ ನೆನಪಿಗಾಗಿ ದೇಗುಲ ನಿರ್ವಿುಸಲು ತೀರ್ವನಿಸಿದ್ದಾರೆ. ಇಂಥ ಅಪರೂಪದ ಘಟನೆ ನಗರದ ಕುರುಬಗೇರಿಯಲ್ಲಿ ನಡೆದಿದೆ.
ಕುರುಬಗೇರಿ ನಿವಾಸಿ ದಿಲೀಪ ಹಿಲದಹಳ್ಳಿ ಹಾಗೂ ಮಂಜು ಪೈ ಕುಸ್ತಿಪಟುಗಳಾಗಿದ್ದು, ಇಬ್ಬರೂ ಅಚ್ಚುಮೆಚ್ಚಿನ ಸ್ನೇಹಿತರು. ವಿವಿಧೆಡೆ ಏರ್ಪಡಿಸಿದ್ದ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದ ಮಂಜು ಪೈ, ಪಂದ್ಯವೊಂದರಲ್ಲಿ ಬೆಳ್ಳಿ ಗದೆ ಗೆದ್ದಿದ್ದರು. ಆದರೆ, ದುರದೃಷ್ಟವಶಾತ್ 2015ರಲ್ಲಿ ಮಂಜು ಪೈ ಮೃತಪಟ್ಟರು. ಸ್ನೇಹಿತನನ್ನು ಕಳೆದುಕೊಂಡ ದಿಲೀಪ, ಅವರ ನೆನಪಿಗಾಗಿ 1.50 ಲಕ್ಷ ರೂಪಾಯಿ ಕೊಟ್ಟು ಫೈಟರ್ ಟಗರು ತಂದು ಅದಕ್ಕೆ ಮಂಜು ಪೈ ಎಂದು ನಾಮಕರಣ ಮಾಡಿದರು.
ರಾಜ್ಯದ ಯಾವುದೇ ಭಾಗದಲ್ಲಿ ಟಗರಿನ ಕಾಳಗ ಏರ್ಪಟ್ಟರೆ ಅಲ್ಲಿ ದಿಲೀಪ ತನ್ನ ಟಗರಿನೊಂದಿಗೆ ಹಾಜರಾಗುತ್ತಿದ್ದರು. ಬಹುತೇಕ ಪಂದ್ಯಗಳಲ್ಲಿ ಟಗರು ಪ್ರಥಮ ಸ್ಥಾನ ಪಡೆದುಕೊಂಡಿದೆ. ಜತೆಗೆ ಕಾಳಗದಲ್ಲಿ ಗೆಲ್ಲುವ ಮೂಲಕ ದಿಲೀಪನಿಗೆ ಲಕ್ಷಾಂತರ ರೂಪಾಯಿ ಲಾಭವನ್ನೂ ತಂದುಕೊಟ್ಟಿದೆ. ದಿಲೀಪನ ಟಗರು ಕಾಳಗಕ್ಕಿಳಿದರೆ ಸಾಕು, ಅಭಿಮಾನಿಗಳು ಚಪ್ಪಾಳೆ, ಕೇಕೆ, ಸಿಳ್ಳೆ ಹೊಡೆದು ಹುರಿದುಂಬಿಸುತ್ತಿದ್ದರು. ಎಲ್ಲ ಸ್ಪರ್ಧೆಗಳಲ್ಲೂ ಗೆಲುವು ಸಾಧಿಸಿದ ಕಾರಣ ಟಗರಿಗೆ ಸೋಲಿಲ್ಲದ ಸರದಾರ ಎಂತಲೂ ಕರೆಯುತ್ತಿದ್ದರು. ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಟಗರಿನ ಕಾಳಗದಲ್ಲಿ ದಿಲೀಪ ಸಹ ತನ್ನ ಟಗರನ್ನು ಅಖಾಡಕ್ಕೆ ಬಿಟ್ಟಿದ್ದ. ಆದರೆ, ಅಖಾಡಕ್ಕೆ ಇಳಿಯುತ್ತಿದ್ದಂತೆ ಏಕಾಏಕಿ ಕುಸಿದು ಮಂಗಳವಾರ ಮೃತಪಟ್ಟಿದೆ ಟಗರು. ಸ್ನೇಹಿತ ಮಂಜು ಪೈ ಅಗಲಿಕೆಯನ್ನು ಮರೆಸಿದ್ದ ಟಗರು ಇಲ್ಲವಾಗಿರುವುದು ದಿಲೀಪ ಅವರಿಗೆ ತೀವ್ರ ನೋವುಂಟು ಮಾಡಿದೆ. ಕುರುಬಗೇರಿಯ ನಿವಾಸದಲ್ಲಿ ಟಗರಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಟಗರಿನ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಸಂಜೆ ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಟಗರಿನ ಮೆರವಣಿಗೆ ಮಾಡಿ ಖಾಸಗಿ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
ಕುಸ್ತಿಪಟು ಆಗಿದ್ದ ಮಂಜು ಪೈ ನನ್ನ ಅತ್ಯಂತ ಆತ್ಮೀಯ ಗೆಳೆಯನಾಗಿದ್ದ. ಆತ ಮೃತಪಟ್ಟ ಬಳಿಕ ಆತನನ್ನು ಮರೆಯಲಾಗದೆ ಫೈಟರ್ ಟಗರು ತಂದು ಸಾಕಿದ್ದೆ. ಗೆಳೆಯನಂತೆ ಟಗರೂ ಕೂಡ ಸೋಲಿಲ್ಲದ ಸರದಾರನಂತಿತ್ತು. ಅದರಿಂದ ನಮ್ಮ ಕುಟುಂಬಕ್ಕೂ ಒಳ್ಳೆಯದಾಗಿದೆ. ಹೀಗಾಗಿ, ನಮ್ಮ ಕುಟುಂಬದ ಸದಸ್ಯನಂತೆ ಅದಕ್ಕೂ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ. | ದಿಲೀಪ ಹಿಲದಹಳ್ಳಿ, ಟಗರಿನ ಮಾಲೀಕ