ವಿವಿ ಮುಚ್ಚಿದರೆ ಉಗ್ರ ಹೋರಾಟ

A fierce fight if VV is closed
ಬಾಗಲಕೋಟೆ ವಿವಿ ರದ್ದು ಕ್ರಮ ಖಂಡಿಸಿ ಜಮಖಂಡಿ ನಗರದ ದೇಸಾಯಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಶಿರಸ್ತೇದಾರ್ ಗಂಗಾಧರ ಹೊಸಕೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಓಲೇಮಠದ ಆನಂದ ದೇವರು, ಎಂಎಲ್‌ಸಿ ಎಚ್.ಆರ್.ನಿರಾಣಿ ಇತರರಿದ್ದಾರೆ. 
Published on

ಜಮಖಂಡಿ: ನಗರದಲ್ಲಿನ ಬಾಗಲಕೋಟೆ ವಿಶ್ವವಿದ್ಯಾಲಯ ಸೇರಿ ರಾಜ್ಯದ 9 ವಿವಿಗಳನ್ನು ರದ್ದು ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ವಿವಿಧ ಪಕ್ಷದ ಮುಖಂಡರು, ಓಲೇಮಠದ ಆನಂದ ದೇವರ ನೇತೃತ್ವದಲ್ಲಿ ನಗರದ ಬಾಗಲಕೋಟೆ ವಿವಿಯಿಂದ ಬೃಹತ್ ಪಾದಯಾತ್ರೆ ಮೂಲಕ ಕುಂಚನೂರ ವೃತ್ತ, ಗವಳಿಗಲ್ಲಿ, ಕೋರ್ಟ್ ರಸ್ತೆ, ಸುವರ್ಣಾ ಥೇಟರ್, ಅಶೋಕ ವೃತ್ತ, ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಎ.ಜಿ.ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರ ತಡೆದು ಶಿರಸ್ತೇದಾರ್ ಗಂಗಾಧರ ಹೊಸಕೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರ 18 ತಿಂಗಳಲ್ಲಿ ಆರ್ಥಿಕವಾಗಿ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳ ಮೇಲೆ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದ ಪ್ರಗತಿ ಶೂನ್ಯವಾಗಿದೆ. ಬಿಜೆಪಿ ಆಡಳಿತದಲ್ಲಿ ಪ್ರಾರಂಭಿಸಿದ 9 ವಿವಿಗಳಿಗೆ ಆರ್ಥಿಕ ತೊಂದರೆ ಇದೆ ಎಂದು ನೆಪ ಹೇಳಿ ವಿವಿ ಮುಚ್ಚಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.

ಸರ್ಕಾರ 5 ವರ್ಷ ಗ್ಯಾರಂಟಿ ಯೋಜನೆಗಳಿಗೆ ಅಪಾರ ಅನುದಾನ ಮೀಸಲಿರಿಸುತ್ತಿದೆ. ಆದರೆ, ಪ್ರತಿ ವಿಶ್ವ ವಿದ್ಯಾಲಯಕ್ಕೆ ಪ್ರತಿ ವರ್ಷ 2 ಕೋಟಿ ರೂ. ಅನುದಾನ ನೀಡುತ್ತೇವೆ ಎಂದು ಹೇಳಿ ಇಲ್ಲಿಯ ವರೆಗೆ ಒಂದು ರೂಪಾಯಿಯೂ ಅನುದಾನ ನೀಡಿಲ್ಲ. ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಲು ಹುನ್ನಾರ ನಡೆಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಜಮಖಂಡಿಯ ಬಾಗಲಕೋಟೆ ವಿವಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಪ್ರತಿ ವಿವಿಗೆ ಸರ್ಕಾರ 70ರಿಂದ 80 ಎಕರೆ ಜಮೀನು ಮಂಜೂರು ಮಾಡುವುದನ್ನು ಬಿಟ್ಟು ವಿಶ್ವ ವಿದ್ಯಾಲಯಗಳನ್ನೇ ಬಂದ್ ಮಾಡಲು ಹೊರಟಿರುವುದನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ. ಈ ಕ್ರಮವನ್ನು ಹಿಂಪಡೆಯದೆ ಹೋದರೆ ಮಾ.3ರಂದು ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ನಿಷ್ಕ್ರಿಯಗೊಳಿಸಿ ಮಂಡ್ಯದಲ್ಲಿ ಸಮಗ್ರ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವ ಹುನ್ನಾರ ಮಾಡಿರುವುದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಇದನ್ನು ರದ್ದುಪಡಿಸಿದರೆ ಉಗ್ರ ಸ್ವರೂಪ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಓಲೇಮಠದ ಆನಂದ ದೇವರು ಮಾತನಾಡಿ, ಆರ್ಥಿಕತೆ ಕಡಿಮೆಯಾದರೆ ನಡೆಯುತ್ತದೆ. ಆದರೆ ನೈತಿಕತೆ ಕಡಿಮೆಯಾದರೆ ದೇಶ ಅಲ್ಲೋಲ ಕಲ್ಲೋಲ್ಲವಾಗುತ್ತದೆ. ಪರಿಸರ ಹಾಳು ಮಾಡುವ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲು ಮುಂದಾಗುತ್ತಿರಿ. ಆದರೆ ಉತ್ತಮ ಪರಿಸರ ನಿರ್ಮಾಣ ಮಾಡುವ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಹುನ್ನಾರ ಮಾಡಿರುವುದು ಖಂಡನೀಯ. ಆರ್ಥಿಕ ತೊಂದರೆ ಇದ್ದರೆ ಮನೆ ಮನೆ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತೇವೆ. ಸರ್ಕಾರ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕು ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ವಿಜಯಪುರ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಪ್ರದೀಪ ಮೆಟಗುಡ್ ಮಾತನಾಡಿದರು. ಎಬಿವಿಪಿ ಕಾರ್ಯಕರ್ತರಾದ ದರ್ಶನ ಆಲಗೂರ, ಪುಂಡಲೀಕ ಪೂಜಾರಿ, ಪರಶುರಾಮ ಜಿಟ್ಟಿ, ಧರೆಪ್ಪ ಬಾಳೋಜಿ, ಚನ್ನಪ್ಪ, ಶೀತಲ, ಬಿಜೆಪಿ ಮುಖಂಡರಾದ ಅಜೇಯ ಕಡಪಟ್ಟಿ, ಸದಾಶಿವ ಕವಟಗಿ, ವಧರ್ಮಾನ ಯಲಗುದ್ರಿ, ಮಲ್ಲು ದಾನಗೌಡ, ಗಣೇಶ ಶಿರಗಣ್ಣವರ, ಪ್ರದೀಪ ಮೆಟಗುಡ್ಡ, ವಿನೋದ ಬಿರಾದಾರ, ವಿನಾಯಕ ಗವಳಿ, ರಾಜು ಚಿಕನಾಳ, ಪ್ರದೀಪ ಶೃಂಗಾರಿ, ಸಿದ್ದು ನ್ಯಾಮಗೌಡ, ಪವನ ಸಾಳುಂಕೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net