

ಭಟ್ಕಳ: ಮಣ್ಕುಳಿಯ ಶ್ರೀ ಹನುಮಂತ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮದ 3ನೇ ದಿವಸ ಶನಿವಾರ ದೇವರ ಪಲ್ಲಕ್ಕಿ ಉತ್ಸವ ಸಹಸ್ರಾರು ಭಕ್ತರ ಹಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ದೇಗುಲದಲ್ಲಿ ಆಶ್ಲೇಷಬಲಿ ಹೋಮ, ಹವನಾದಿಗಳ ಬಳಿಕ ಮಹಾಪೂಜೆ ನೆರವೇರಿಸಿ ಪಲ್ಲಕ್ಕಿ ಉತ್ಸವಕ್ಕೆ ಸಿದ್ಧತೆ ನಡೆಸಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಬಳಿಕ ಸಂಜೆ 4 ಗಂಟೆಗೆ ದೇವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ಸವ ಮೆರವಣಿಗೆ ಮಣ್ಕುಳಿ ಮಾರ್ಗವಾಗಿ ವೀರ ವಿಠ್ಠಲ ರಸ್ತೆಯಲ್ಲಿ ಸಾಗಿ ಬಂದು ನೆಹರು ರಸ್ತೆಯ ಮೂಲಕ ಚನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮರೆವಣಿಗೆ ಬಸ್ತಿ ರಸ್ತೆ ಮೂಲಕ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಹಾಗೂ ರಘುನಾಥ ದೇವಸ್ಥಾನದಲ್ಲಿ ಶ್ರೀರಾಮ ಹನುಮರ ಸಮಾಗಮವಾದ ನಂತರ ಮರಳಿ ಬಂದು ರಾತ್ರಿ ದೇವಸ್ಥಾನ ತಲುಪಿತು. ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಭಕ್ತರು ರಸ್ತೆಯಲ್ಲಿ ರಂಗೋಲಿ ಬಿಡಿಸಿ, ಹನುಮನಿಗೆ ಹಣ್ಣುಕಾಯಿ ಅರ್ಪಿಸಿ ಪುನೀತರಾದರು.
ಚಂಡೆವಾದನ, ತಟ್ಟಿರಾಯ ಕುಣಿತ, ಮಹಿಳಾ ತಂಡಗಳ ಭಜನಾ ಕುಣಿತ, ದೇವತೆಗಳ ರೂಪ ತಾಳಿದ ಛದ್ಮ ವೇಷಧಾರಿಗಳು ಮೆರವಣಿಗೆ ಮೆರುಗು ಹೆಚ್ಚಿಸಿದರು. ದೇವಸ್ಥಾನ ಜೀಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ ಶೆಟ್ಟಿ, ಪ್ರಮುಖರಾದ ಆನಂದ ಶೆಟ್ಟಿ, ನಾರಾಯಣ ಶೆಟ್ಟಿ, ಪ್ರಕಾಶ ಶಿರಾಲಿ, ಸುಬ್ರಮಣ್ಯ ಶೆಟ್ಟಿ, ಶಿವರಾಮ ಶೆಟ್ಟಿ, ಶ್ರೀಧರ ಶೆಟ್ಟಿ ಸೇರಿ ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.