ಶಿಶುವಿನಹಾಳದಲ್ಲಿ ಸಂಭ್ರಮದ ರಥೋತ್ಸವ

Shareef Jatre
Published on

ಶಿಗ್ಗಾಂವಿ: ತಾಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಭಾನುವಾರ ಸಂತ ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಭಟ್ಟರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಹಿಂದು, ಮುಸ್ಲಿಂ ಸಮಾಜದವರು ಭಾವೈಕ್ಯದಿಂದ ಹರ ಹರ ಮಹಾದೇವ ಎಂಬ ಜಯ ಘೊಷದೊಂದಿಗೆ ರಥೋತ್ಸವದ ಮೆರವಣಿಗೆ ಸಾಗಿತು. ಭಕ್ತರು ಉತ್ತತ್ತಿ, ಬಾಳೆಹಣ್ಣನ್ನು ರಥಕ್ಕೆ ಎಸೆದು ಪುನೀತರಾದರು. ರಥ ನಿಲ್ಲಿಸಿದ ಗುಡಿಯ ಮುಂಭಾಗದಲ್ಲಿ ಹಣ್ಣು, ಕಾಯಿಗಳನ್ನು ಒಡೆದು ಹರಕೆ ಸಲ್ಲಿಸಿದರು.

ಸೂಫಿಸಂತ ಪರಂಪರೆಯ ಗದ್ದುಗೆಗೆ ನಮಿಸಿದ ಭಕ್ತರು ಆಶೀರ್ವಾದ ಪಡೆದರು. ಸಕ್ಕರೆ, ಭಸ್ಮ, ಅಂಗಾರ ಪ್ರಸಾದ ಪಡೆದರು. ಗುಡಿಯ ಬಳಿ ನೆರೆದಿದ್ದ ಶರಣರು, ಸಂತರು, ಸೂಫಿಗಳು, ಫಕೀರರ ಆಶೀರ್ವಾದ ಪಡೆದರು. ರಥೋತ್ಸವಕ್ಕೂ ಮೊದಲು ಗುರು ಗೋವಿಂದ ಭಟ್ಟರು ಹಾಗೂ ಶಿಶನಾಳ ಶರೀಫರ ಮೂರ್ತಿಗಳನ್ನು ಶಿಶುವಿನಹಾಳ ಗ್ರಾಮದ ಶರೀಫರ ಗುಡಿಯಿಂದ ಪಲ್ಲಕ್ಕಿ ಮಹೋತ್ಸವದ ಮೂಲಕ ತರಲಾಯಿತು. ಪಲ್ಲಕ್ಕಿ ಗದ್ದುಗೆ ಪ್ರದಕ್ಷಿಣೆ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಿ ರಥ ಎಳೆಯಲಾಯಿತು.

ಕುದರೆ ಕುಣಿತ, ಡೊಳ್ಳು ಕುಣಿತ, ಮರಗಾಲು ಕುಣಿತ, ವೀರಗಾಸೆ, ಪುರವಂತರು, ಭಜನೆ, ಮುಳ್ಳಿನ ಪಾದಿಕೆಗಳ ಮೇಲೆ ನಿಲ್ಲುವುದು. ವಿವಿಧ ಕಲಾವಿದರ ಸಾಮೂಹಿಕ ನೃತ್ಯ ಜನರನ್ನು ಆಕರ್ಷಿಸಿದವು.

ನಾಡಿನ ವಿವಿಧೆಡೆಯಿಂದ ಭಕ್ತ ಸಮೂಹವು ಚಕ್ಕಡಿ, ಟ್ರ್ಯಾಕ್ಟರ್​ಗಳಲ್ಲಿ ಕುಟುಂಬ ಸಮೇತರಾಗಿ ಬಂದಿದ್ದರು. ಹರಕೆಯಾಗಿ ತಂದಿರುವ ರೊಟ್ಟಿ ಬುತ್ತಿಯನ್ನು ಜಾತ್ರೆಗೆ ಬಂದ ಭಕ್ತರಿಗೆ ಹಂಚಿದರು.

ಶಿಶುವಿನಹಾಳ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ ಶರೀಫರ ಜಾತ್ರಾ ಮಹೋತ್ಸವಕ್ಕೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಶಿವಯೋಗಿಗಳ ಪಂಚಾಗ್ನಿಮಠ ಟ್ರಸ್ಟ್​ನ ಎಲ್ಲ ಧರ್ಮದರ್ಶಿಗಳು, ವಿವಿಧ ಭಾಗದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net