ಹಬ್ಬ, ಜಾತ್ರೆ, ಉತ್ಸವ, ನಮ್ಮ ಸಂಸ್ಕೃತಿ ಸಂಕೇತ

9 ಎಸ್ಕೆಪಿ 2b
ಶಾಸಕ ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರ ತಾಲೂಕಿನ ಹಿರೇಕಲುವತ್ತಿ ಶ್ರೀ ಮಣ್ಣು ಬಸವೇಶ್ವರ ಸ್ವಾಮಿಯ ದರ್ಶನ ಪಡೆದರು.
Published on

ಶಿಕಾರಿಪುರ: ಮೃಣ್ಮಯದಿಂದ ಮಾಡಿದ ಆಳೆತ್ತರದ ಬಸವಣ್ಣ ನೂರಾರು ವರ್ಷಗಳಿಂದ ಈ ಭಾಗದ ಜನತೆಯನ್ನು ಪೊರೆಯುತ್ತಿದ್ದಾನೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಹಿರೇಕಲುವತ್ತಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಮಣ್ಣು ಬಸವಣ್ಣ ಸ್ವಾಮಿಯ ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಮಾತನಾಡಿದ ಅವರು, ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳು ನಮ್ಮ ಸಂಸ್ಕೃತಿಯ ಸಂಕೇತ. ಇವುಗಳಿಂದ ನಮಗರಿವಿಲ್ಲದಂತೆ ಧರ್ಮೋತ್ಥಾನ ಕಾರ್ಯ ನಡೆಯುತ್ತಿದೆ. ಧರ್ಮಾತ್ಮರು ಜನಿಸಿದ ಪುಣ್ಯಭೂಮಿಯಲ್ಲಿ ನಾವು ಸದಾ ಧರ್ಮ ಮಾರ್ಗದಲ್ಲಿ ಸಾಗಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮವು ಸದಾ ನಮ್ಮ ನೆರಳಾಗಿ ಸಹಾಯ ಮಾಡುತ್ತದೆ ಎಂದರು.
ಸ್ವಾಮಿಗೆ ಹರಕೆ ಮಾಡಿಕೊಂಡರೆ ಕಳವಾದ ಜಾನುವಾರುಗಳು ಮರಳಿ ಸಿಗುತ್ತವೆ ಎಂಬುದು ಈ ಭಾಗದ ಜನರ ನಂಬಿಕೆ. ಇಂತಹ ಸ್ವಾಮಿಯ ದರ್ಶನದಿಂದ ನಾವು ಪುನೀತರಾಗುತ್ತೇವೆ. ಸ್ವಾಮಿಯ ದಯೆಯಿಂದ ಎಲ್ಲರ ಬದುಕು, ನಾಡು ಸಮೃದ್ಧಿಯಾಗಲಿ. ದ್ವೇಷಾಸೂಯೆಗಳಿಂದ ಮುಕ್ತರಾಗೋಣ. ಹರಿಷಡ್ವರ್ಗಳೆಂಬ ಕಹಿಯಿಂದ ಹೊರಬಂದು ಸಹಬಾಳ್ವೆಯ ಸಿಹಿ ಹಂಚೋಣ ಎಂದು ಹೇಳಿದರು.
ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಹಾಳಾದ ಬೆಳೆಗಳಿಗೆ ಸೂಕ್ತವಾದ ಮಧ್ಯಂತರ ಪರಿಹಾರ ಕೊಡಬೇಕು. ಜಗತ್ತಿಗೆ ಅನ್ನ ನೀಡುವ ಭೂಮಿತಾಯಿಯ ಚೊಚ್ಚಲ ಮಗ ರೈತ ಸಂಕಷ್ಟದಲ್ಲಿದ್ದಾನೆ. ರೈತರು ನಕ್ಕರೆ ನಾಡು ಸಮೃದ್ಧಗೊಳ್ಳುತ್ತದೆ. ರೈತರ ಬೆವರಿನ ಹನಿಯೇ ಅಮೃತಧಾರೆ ಎಂದರು.
ಶ್ರೀ ಮಣ್ಣು ಬಸವಣ್ಣ ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾಮಸ್ಥರು, ಭಕ್ತರು ಇದ್ದರು.

ವಿವಿಧೆಡೆ ಜನತಾ ದರ್ಶನ
ತಾಲೂಕಿನ ಭದ್ರಾಪುರ, ನಂದಿಹಳ್ಳಿ, ತರಲಘಟ್ಟ, ದೊಡ್ಡ ಜೋಗಿಹಳ್ಳಿ, ಕಪ್ಪನಹಳ್ಳಿ, ಹಾರೋಗೊಪ್ಪ, ಸಿಡಗಿನಾಳ್, ಅತ್ತಿಬೈಲು, ಎಳನೀರು ಕೊಪ್ಪ, ಕೊರಲಹಳ್ಳಿ, ಅಂಜನಾಪುರ, ಮತಿಘಟ್ಟ ಸೇರಿದಂತೆ ವಿವಿಧೆಡೆ ಜನತಾ ದರ್ಶನ ಮಾಡಿದ ಬಿ.ವೈ.ವಿಜಯೇಂದ್ರ ಜನರ ಸಮಸ್ಯೆಗಳನ್ನು ಆಲಿಸಿದರು. ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಪ್ರಮುಖರಾದ ಚನ್ನವೀರಪ್ಪ, ಪಾಲಾಕ್ಷಪ್ಪ, ಬೆಣ್ಣೆ ಪ್ರವೀಣ್, ಮಿಲಿಟರಿ ಬಸವರಾಜ್, ಕೊರಲಹಳ್ಳಿ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net