

BMTC Bus: ಬಸ್ ನಿಲ್ಲಿಸಲು ನಿರಾಕರಿಸಿದ್ದಕ್ಕಾಗಿ ಮಹಿಳಾ ಪ್ರಯಾಣಿಕರೊಬ್ಬರು ಬಿಎಂಟಿಸಿ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಶನಿವಾರ (ಜೂ.14) ನಡೆದಿದೆ.
ಬಸ್ ಚಾಲಕ ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಅಧಿಕೃತ ಬಸ್ ನಿಲ್ದಾಣದಲ್ಲಿ ನಿಲ್ಲಿಸುವುದಾಗಿ ಹೇಳಿದ್ದಾನೆ. ಆದರೆ ಇದರಿಂದ ಕೋಪಗೊಂಡ ಮಹಿಳಾ ಪ್ರಯಾಣಿಕಳು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ.
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ತಾನು ಇಳಿಯುವ ಸ್ಥಳದಲ್ಲಿ ಬಸ್ ನಿಲ್ಲಿಸಲು ನಿರಾಕರಿಸಿದ ಕಾರಣ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಆದ ಕಾವ್ಯ, ಬಿಎಂಟಿಸಿ ಡಿಪೋ 38 ರ ಬಸ್ ನಂ. KA57F0836 ಗೆ ಚಾಲಕನಾದ ಅತ್ತರ ಹುಸೇನ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ತನ್ನ ಕಾಲಿನಿಂದ ಚಪ್ಪಲಿಯನ್ನು ತೆಗೆದು ಡ್ರೈವರ್ಗೆ ಹೊಡೆದಿದ್ದಾರೆ ಎಂದು ಚಾಲಕ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿಯಲ್ಲಿ ನಡೆದಿದೆ.
ಬಸ್ ಹತ್ತಿ ಕೈಕೊಂಡರಹಳ್ಳಿ ಬಸ್ ನಿಲ್ದಾಣಕ್ಕೆ ಟಿಕೆಟ್ ತೆಗೆದುಕೊಂಡ ಕಾವ್ಯ, ಹುಸೇನ್ ಅವರನ್ನು ತನ್ನ ಕಚೇರಿಯ ಮುಂದೆ ಬಸ್ ನಿಲ್ಲಿಸುವಂತೆ ಕೇಳಿಕೊಂಡಳು. ಜನದಟ್ಟಣೆಯ ಕಾರಣದಿಂದಾಗಿ ವಾಹನಗಳ ಚಲನೆ ನಿಧಾನವಾಗಿತ್ತು ಮತ್ತು ಪೊಲೀಸರು ಯಾವುದೇ ವಾಹನಗಳನ್ನು ನಿಲ್ಲಿಸಲು ಬಿಡುತ್ತಿರಲಿಲ್ಲ. ಒಂದು ವಾರದ ಹಿಂದೆ ಕೆಲವು ಮೀಟರ್ ದೂರಕ್ಕೆ ಸ್ಥಳಾಂತರಿಸಲಾದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವುದಾಗಿ ಹುಸೇನ್ ಅವರಿಗೆ ತಿಳಿಸಿದರು.
ಆದರೆ ಕಾವ್ಯಾ ಅವನು ನಿಲ್ಲಿಸುವಂತೆ ಒತ್ತಾಯಿಸಿ ಈ ರೀತಿ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
"ಆಕೆ ಹೊಟ್ಟೆ ಹಿಡಿದುಕೊಂಡು ಮಹಿಳೆಯ ವೈಯಕ್ತಿಕ ಸಮಸ್ಯೆಯ ಬಗ್ಗೆ ಕಿರುಚಲು ಪ್ರಾರಂಭಿಸಿದಾಗ ನನಗೆ ಭಯವಾಯಿತು. ಬಲ ತಿರುವು ಪಡೆದ ಕೂಡಲೇ ನಾನು ಬಸ್ ನಿಲ್ಲಿಸಿದೆ, ಅವಳು ಬಸ್ ಇಳಿದಳು. ಇಳಿಯುವಾಗ ಅವಳು ನನ್ನನ್ನು ಅಸಹ್ಯವಾಗಿ ಬೈಯಲು ಪ್ರಾರಂಭಿಸಿದಳು. ಮತ್ತೆ ಆಕೆ ಬಸ್ ಹತ್ತಿದಳು, ತನ್ನ ಬಲ ಚಪ್ಪಲಿಯನ್ನು ತೆಗೆದುಕೊಂಡು ನನ್ನ ಮೇಲೆ ಹಲ್ಲೆ ಮಾಡಿದಳು " ಎಂದು ಹುಸೇನ್ ಹೇಳಿದರು.
ಅವಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ನಾನು ಅವಳ ಹಿಂದೆ ಓಡಿ ಹತ್ತಿರದ ಸಂಚಾರ ಮಹಿಳಾ ಪೊಲೀಸರಿಗೆ ಮಾಹಿತಿ ನೀಡಿದೆ. ಅವಳು ಸಂಚಾರ ಪೊಲೀಸರನ್ನೂ ಅಸಭ್ಯ ಭಾಷೆ ಬಳಸಿ ಗದರಿಸಿದಳು ಮತ್ತು ಪೊಲೀಸರು ಲಂಚ ತೆಗೆದುಕೊಳ್ಳುತ್ತಾರೆ ಮತ್ತು ಅವಳನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಅವಾಜ್ ಹಾಕಿದ್ದಾಳೆ.
ನಂತರ ಆಕೆಯನ್ನು ಬೆಳ್ಳಂದೂರು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ದೂರು ದಾಖಲಿಸಿದ ನಂತರ ಆಕೆಯ ಪತಿ ಅಲ್ಲಿಗೆ ಬಂದು, ಆಕೆ ಮಾನಸಿಕ ತೊಂದರೆಗೆ ಔಷಧ ಸೇವಿಸುತ್ತಿದ್ದಾಳೆ ಎಂದು ಹೇಳಿ, ಆಕೆಯನ್ನು ಕ್ಷಮಿಸುವಂತೆ ಚಾಲಕನನ್ನು ಮತ್ತು ಪೊಲೀಸರನ್ನು ಕೇಳಿಕೊಂಡರು. ರಾಜಿ ಮಾಡಿಕೊಳ್ಳಲು ಬಯಸಿದರೆ, ಎಫ್ಐಆರ್ ಈಗಾಗಲೇ ದಾಖಲಾಗಿರುವುದರಿಂದ ನ್ಯಾಯಾಲಯದಲ್ಲಿ ರಾಜಿ ಮಾಡಿಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ. (ಏಜೆನ್ಸೀಸ್)