

ಮೈಸೂರು: ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಕಾನೂನು ಘಟಕದ ವತಿಯಿಂದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಸೆ.16ರಂದು ಅಭಿನಂದನಾ ಹಾಗೂ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಅಧ್ಯಕ್ಷ ತಿಮ್ಮಯ್ಯ ತಿಳಿಸಿದರು.
ಅಂದು ಮಧ್ಯಾಹ್ನ 3ಗಂಟೆಗೆ ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೆರವೇರಿಸಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಯಾಗಿ ಪಶುಸಂಗೋಪನ ಸಚಿವ ಕೆ.ವೆಂಕಟೇಶ್ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭದ ವಿಶೇಷ ಆಹ್ವಾನಿತರಾಗಿ ಕಾಂಗ್ರೆಸ್ ಶಾಸಕರಾದ ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಡಾ.ಮಂಥರ್ ಗೌಡ, ದರ್ಶನ್ ಧ್ರುವನಾರಾಯಣ್ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಘಟಕದ ರಾಜ್ಯ ಕಾರ್ಯದರ್ಶಿ ಕೆ.ಗಂಗಾಧರ್, ಉಪಾಧ್ಯಕ್ಷ ಸುರೇಶ್ ಪಾಳ್ಯ, ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜ್, ಮಂಜುನಾಥ್, ಎಚ್.ಎಸ್.ಪುಟ್ಟರಸ ಇದ್ದರು.