

ಹುಬ್ಬಳ್ಳಿ: ಶ್ರೀ ಹುಲಿಗೆಮ್ಮದೇವಿ ಸಕಲ ಸದ್ಭಕ್ತ ಮಂಡಳಿ ವತಿಯಿಂದ ಇಲ್ಲಿಯ ಅರವಿಂದನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿ ಪಡೆದ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರಿಗೆ ಮಂಗಳವಾರ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ, ಮುತ್ತಿನಹಾರ ಹಾಕಿ ಪುಷ್ಪಾಭಿಷೇಕ ಮಾಡುವ ಮೂಲಕ ಅಭಿನಂದನೆಗಳ ಮಹಾಪೂರ ಹರಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ, ಸಾಲುಮರದ ತಿಮ್ಮಕ್ಕನವರ ಪುತ್ರ ಉಮೇಶ ಬಳ್ಳೂರ, ಮಳವಳ್ಳಿ ಮಹಾದೇಸ್ವಾಮಿ, ಹುಲಗಿ ಕ್ಷೇತ್ರದ ಅರ್ಚಕ ಸತ್ಯನಾರಾಯಣ ಭಟ್ರು, ಭಾರತೀಯ ಸೇವಾ ಸಮಿತಿ ಅಧ್ಯಕ್ಷ ಎಚ್.ಎಂ. ರಾಮಚಂದ್ರ (ಹೂಡಿ ಚಿನ್ನಿ), ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಪುಮುಖರಾದ ಅರವಿಂದ ಯಾಳಗಿ, ಬಸವರಾಜ ಬನ್ನಿಕೊಪ್ಪ, ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಸರಿಗಮಪ ಪ್ರತಿಭೆ ಜ್ಞಾನಾ, ಮಿಮಿಕ್ರಿ ಕಲಾವಿದ ಸಾಗರ್ ತುರುವೆಕೇರೆ, ಪ್ರಶಾಂತ ಚಕ್ರವರ್ತಿ, ಜನಧ್ವನಿ ಮಹೇಶ, ಮಂಜು ಕವಿ ಆಗಮಿಸಿದ್ದರು.