ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ತಾಲೂಕಿನ ಕಸಬಾ ಹೋಬಳಿ ದೇವಿಗೆರೆ ಗ್ರಾಮದಲ್ಲಿ ಬುಧವಾರ ಸಾಲಬಾಧೆ ತಾಳಲಾರದೆ ರೈತ ಮಹಿಳೆ ನೇಣಿಗೆ ಶರಣಾಗಿದ್ದಾರೆ.
ಸುಂದ್ರಮ್ಮ(48) ಮೃತರು. ಇವರು ಟ್ರ್ಯಾಕ್ಟರ್ ಖರೀದಿ ಹಾಗೂ ಕೃಷಿ ಚಟುವಟಿಕೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ 10 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಮಾಡಿದ್ದರು. ಪುತ್ರಿ ಮದುವೆಗಾಗಿ ಮಾಡಿದ್ದ ಸಾಲ ಕೂಡ ತೀರಿರಲಿಲ್ಲ. ವಾಡಿಕೆಯಂತೆ ಮಳೆಯಾಗದೆ ಬೆಳೆ ಸಹ ಕೈ ಹಿಡಿದಿರಲಿಲ್ಲ. ಹೀಗಾಗಿ ಸಾಲ ತೀರಿಸಲು ದಾರಿ ತೋರದೆ ತಮ್ಮ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಸಬಾ ಹೋಬಳಿಯ ಕಂದಾಯ ಅಧಿಕಾರಿ ಮೋಹನ್, ಗ್ರಾಮಲೆಕ್ಕಿಗ ಯೋಗೀಶ್ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಜಿಪಂ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತರ ಮಗ ಪ್ರವೀಣ್ ದೂರು ನೀಡಿದ್ದು, ತಾಲೂಕಿನ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.