

ಸೋರಲಮಾವು ಶ್ರೀಹರ್ಷ ತುಮಕೂರು
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ನಡುವೆಯೇ ನಿರೀಕ್ಷೆಗೂ ಮೀರಿ ರಾಗಿ ಬಿತ್ತನೆಯಾಗುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 1.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆಗಸ್ಟ್ ಮೊದಲ ವಾರದಲ್ಲಿಯೇ ಜಿಲ್ಲೆಯಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ. ತಿಪಟೂರು ತಾಲೂಕಿನಲ್ಲಿ ಅತಿಹೆಚ್ಚು ಜನರು ರಾಗಿ ಬೆಳೆಗೆ ಮುಂದಾಗಿದ್ದರೆ, ಪಾವಗಡ ತಾಲೂಕಿನಲ್ಲಿ ನಿರಾಸಕ್ತಿ ತೋರಿದ್ದಾರೆ.
ಆಗಸ್ಟ್ ಮೊದಲ ವಾರದವರೆಗೂ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಈ ವೇಳೆಗೆ 272.7 ಮಿಮೀ ಮಳೆ ಬೀಳುತ್ತಿತ್ತು. ಈ ವರ್ಷ 428.3 ಮಿಮೀ ಮಳೆ ಯಾಗಿರುವುದು ರಾಗಿ ಬಿತ್ತನೆಗೆ ನೆಲವನ್ನು ಹಣ್ಣಾಗಿಸಿದೆ. ಗುಬ್ಬಿ ತಾಲೂಕಿನಲ್ಲಿ ಶೇ.61 ಹೆಚ್ಚು ಮಳೆಯಾಗಿದ್ದರೆ, ತಿಪಟೂರಿನಲ್ಲಿ ವಾಡಿಕೆಯಂತೆ 373 ಮಿಮೀ ಮಳೆಯಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಬೆಳೆಗೆ ಈವರೆಗೂ 3846 ರೂ. ನೀಡಲಾಗುತ್ತಿತ್ತು. ಮುಂದಿನ ವರ್ಷದಿಂದ ಕ್ವಿಂಟಾಲ್ಗೆ 4290 ರೂ. ಲಭ್ಯವಾಗುವುದರಿಂದ ರೈತರು ರಾಗಿ ಬೆಳೆಯಲು ವಿಶೇಷ ಆಸಕ್ತಿ ತೋರಿದ್ದಾರೆ. ಜಾನುವಾರುಗಳ ಶ್ರೇಷ್ಠ ಆಹಾರ ಎನ್ನಿಸಿರುವ ರಾಗಿ ಹುಲ್ಲು ಕೂಡ ಬೇಡಿಕೆ ಉಳಿಸಿಕೊಂಡು ಪಿಂಡಿಗೆ 300 ರೂಪಾಯಿವರೆಗೂ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ರಾಗಿಯ ಕಡೆ ರೈತರ ಮನಸ್ಸು ವಾಲಿದೆ.
ಸಿರಿಧಾನ್ಯಗಳ ತವರು ತುಮಕೂರು ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ರೈತರು ನಿರಾಸಕ್ತಿ ತೋರಿಸಿದ್ದಾರೆ. ಈವರೆಗೂ 199 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆಯಾಗಿದೆ. ಕೃಷಿ ಇಲಾಖೆ 4505 ಹೆ. ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲು ಗುರಿ ಇಟ್ಟುಕೊಂಡಿದೆಯಾದರೂ ಸಹಾಯಧನ ಸ್ಥಗಿತ, ಮಾರುಕಟ್ಟೆ ಸಮಸ್ಯೆಯಿಂದ ಸಿರಿಧಾನ್ಯ ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ.
ಶೇಂಗಾ ಹೊರತುಪಡಿಸಿ ಎಳ್ಳು, ಸೂರ್ಯಕಾಂತಿ, ಹರಳು, ಉಚ್ಚೆಳ್ಳು, ಸಾಸಿವೆ ಸೇರಿ ಕೇವಲ 616 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಎಣ್ಣೆಕಾಳು ಬೆಳೆಯುವವರೇ ಇಲ್ಲದಂತಾಗಿದೆ. ಈಗಾಗಲೇ ವಿದೇಶಿ ಆಮದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಣ್ಣೆಕಾಳು ಬೆಳೆಯಲು ಕೇಂದ್ರ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದರೂ ರೈತರು ಮಾತ್ರ ರಾಗಿ ಹೊರತಾಗಿ ಇನ್ಯಾವುದೇ ಬೆಳೆಯನ್ನು ಮಳೆಯಾಶ್ರಿತವಾಗಿ ಬೆಳೆಯಲು ಆಸಕ್ತಿಯನ್ನೇ ತೋರಿಸುತ್ತಿಲ್ಲ. ಜಿಲ್ಲೆಯಲ್ಲಿ 15008 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಳೆಯಲಾಗುತ್ತಿದ್ದು, ತೊಗರಿ 7999 ಹೆಕ್ಟೇರ್, ಹೆಸರು 2466 ಹೆಕ್ಟೇರ್, ಅಲಸಂದೆ 2881 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ರಾಗಿಗೆ ಕಾಲ ಕೂಡಿಬಂದಿದ್ದು, ಎಲ್ಲೆಡೆಯೂ ಬಿತ್ತನೆ ಬಿರುಸಾಗಿಯೇ ನಡೆಯುತ್ತಿದೆ.
ರೈತನ ಮನೆಯಲ್ಲಿ ಬಿತ್ತನೆಬೀಜ ಕೊರತೆ: ಜಿಲ್ಲೆಯಲ್ಲಿ 6,51,276 ಹೆಕ್ಟೇರ್ ಪ್ರದೇಶದಲ್ಲಿ ಹಿಡುವಳಿ ನಡೆಸಲಾಗುತ್ತಿದ್ದು, 5.15 ಲಕ್ಷ ರೈತರು ಭೂಮಿಯನ್ನೇ ನಂಬಿದ್ದಾರೆ. ಕಳೆದ ವರ್ಷ ತೀವ್ರ ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಗ್ರಹಣ ಬಡಿದಿತ್ತು. ಈ ವರ್ಷದ ಉತ್ತಮ ಮಳೆಯಿಂದ ಉಲ್ಲಾಸಿತರಾಗಿ ರಾಗಿ, ಮೆಕ್ಕೆಜೋಳ ಬೆಳೆಯಲು ವಿಶೇಷ ಆಸಕ್ತಿ ತೋರಿದ್ದಾರೆ. ಕಳೆದ ವರ್ಷದ ಬರದಿಂದ ಬಹುತೇಕ ರೈತರ ಮನೆಯಲ್ಲಿ ಬಿತ್ತನೆಗೂ ರಾಗಿ ಇಲ್ಲದಂತಾಗಿತ್ತು. ಹಾಗಾಗಿ, ಈ ವರ್ಷ ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದ ಹಿನ್ನೆಲೆಯಲ್ಲಿ ರಾಗಿ ಬಿತ್ತನೆಯ ಪ್ರಗತಿ ಕೃಷಿ ಇಲಾಖೆ ಕಣ್ಣಿಗೆ ಬಿದ್ದಿದೆ. ರೈತರು ಬಿತ್ತನೆ ಬೀಜಕ್ಕಾಗಿ ಪರವಾಲಂಬಿಗಳಾಗಿರುವುದು ಭವಿಷ್ಯದಲ್ಲಿ ಸಂಕಷ್ಟ ತಂದೊಡ್ಡುವ ಅಪಾಯವಿದೆ.
ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ರಾಗಿ ಬಿತ್ತನೆ ಚುರುಕಾಗಿ ನಡೆಯುತ್ತಿದೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿರುವುದು ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿರುವುದು ರಾಗಿ ಬೆಳೆಯಲು ಕಾರಣವಾಗಿರಬಹುದು. ಭವಿಷ್ಯದಲ್ಲಿ ಯೂರಿಯಾಗೆ ಬೇಡಿಕೆ ಹೆಚ್ಚಾಗುವ ನಿರೀೆಯಿಂದ ಈ ಬಗ್ಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.| ಡಾ.ರಮೇಶ್ ಜಂಟಿ ಕೃಷಿ ನಿರ್ದೇಶಕ ಸದಾ ನಷ್ಟದಲ್ಲಿಯೇ ಕೃಷಿ ಬದುಕು ಸಾಗಿ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ರಾಗಿ ಸೇರಿದಂತೆ ಯಾವುದೇ ಬೆಳೆ ಬೆಳೆದರೂ ರೈತರಿಗೆ ಲಾಭವಾಗುತ್ತಿಲ್ಲ. ರಾಗಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಾರೆಯಾದರೂ ಇದು ಲಾಭ ತರುವ ದರವೇನಲ್ಲ. ಆದರೆ, ಜಾನುವಾರುಗಳಿಗೆ ಮೇವು ಬೇಕು ಎಂಬ ಉದ್ದೇಶದಿಂದಷ್ಟೇ ರಾಗಿ ಬೆಳೆಯಲು ಜನರು ಮುಂದಾಗಿದ್ದಾರೆ. ಹಸು ಕಟ್ಟಿಕೊಂಡು ಡೇರಿಗೆ ಹಾಲು ಹಾಕಿದರಷ್ಟೇ ಜನರ ಬದುಕು ನಡೆಯುತ್ತಿದೆ.| ಮಾರುತಿ ಚಿಕ್ಕನಾಯಕನಹಳ್ಳಿ