

ಹನೂರು: ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಗುರುವಾರ ವಿದ್ಯುತ್ ಪರಿವರ್ತಕದ ಬೂಸ್ಟರ್ ಕೆಟ್ಟುಹೋಗಿದ್ದ ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಅಧಿಕಾರಿ, ಸಿಬ್ಬಂದಿಗೆ ರೈತರು ದಿಗ್ಬಂಧನ ವಿಧಿಸಿದರು. ಈ ವೇಳೆ ರೈತನೊಬ್ಬ ವಿಷ ಕುಡಿಯಲು ಮುಂದಾಗಿದ್ದರು.
ಈ ಭಾಗದ ಕೂಡಲೂರು, ಅಂಚಿಪಾಳ್ಯ, ಪೆದ್ದನಪಾಳ್ಯ, ಹೂಗ್ಯಂ, ಯರಂಬಾಡಿ ಹಾಗೂ ಇನ್ನಿತರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದ್ದು, ನೆಲ್ಲೂರಿನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಬೂಸ್ಟರ್ ಅಳವಡಿಸಲಾಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಕೆಟ್ಟು ಹೋಗಿತ್ತು. ಇದರಿಂದ ಲಕ್ಷಾಂತರ ರೂ. ವ್ಯಯಿಸಿ ಬೆಳೆಸಿದ ಫಸಲುಗಳು ನೀರಿಲ್ಲದೆ ಒಣಗುತ್ತಿದ್ದವು. ಇದರಿಂದ ರೈತರಲ್ಲಿ ನಷ್ಟದ ಆತಂಕ ಎದುರಾಗಿತ್ತು. ಬೂಸ್ಟರ್ ರಿಪೇರಿಪಡಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮವಹಿಸಿರಲಿಲ್ಲ. ಇದರಿಂದ ಬೇಸತ್ತು ಗ್ರಾಮದಲ್ಲಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಾಮಾಪುರ ಸೆಸ್ಕ್ ಉಪ ಕೇಂದ್ರದ ಜೆಇ ನವೀನ್ ಹಾಗೂ ಸಿಬ್ಬಂದಿ ರಮೇಶ್ ಮಡಿವಾಳರ್, ಕುಮಾರ್ ಹಾಗೂ ರಾಜಶೇಖರ ನಾಯಕ್ ಅವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡು ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಅಲ್ಲಿಯವರೆಗೂ ಗ್ರಾಮದಿಂದ ತೆರಳಲು ಬಿಡುವುದಿಲ್ಲ ಎಂದು ದಿಗ್ಬಂಧನ ವಿಧಿಸಿದರು.
ಈ ವೇಳೆ ಹೂಗ್ಯಂ ಗ್ರಾಮದ ರೈತ ಹುಚ್ಚಯ್ಯ ವಿಷದ ಬಾಟಲಿ ಹಿಡಿದು ಸೆಸ್ಕ್ ಅಧಿಕಾರಿಗಳು ಸಮರ್ಪಕ ವಿದ್ಯುತ್ ನೀಡದ ಪರಿಣಾಮ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇದರಿಂದ ರೈತರು ಕಷ್ಟವನ್ನು ಎದುರಿಸುವಂತಾಗಿದೆ. ಆದ್ದರಿಂದ ರೈತರು ಹಾಗೂ ಗ್ರಾಮಕ್ಕೆ ಒಳ್ಳೆಯದು ಆಗುವುದಾದರೆ ವಿಷ ಕುಡಿಯಲು ಸಿದ್ಧ ಎಂದು ಮುಂದಾಗಿದ್ದರು. ಈ ವೇಳೆ ಅವರನ್ನು ತಡೆದು ಸಮಾಧಾನ ಪಡಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಇಇ ಶಂಕರ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಬಳಿಕ ಸಮಸ್ಯೆಯನ್ನು ಬಗೆಹರಿಸಿ ಸಮರ್ಪಕ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಅಧಿಕಾರಿ, ಸಿಬ್ಬಂದಿಯನ್ನು ಗ್ರಾಮದಿಂದ ಬಿಟ್ಟು ಕಳುಹಿಸಲಾಯಿತು.