

ಮಡಿಕೇರಿ:
ಲಾಭದಾಯಕ ಅಲ್ಲ ಎನ್ನುವುದು ಸೇರಿದಂತೆ ಹಲವು ಕಾರಣಗಳಿಂದ ರೈತರು ಭತ್ತ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಇದೇ ಕಾರಣದಿಂದ ಪಾಳು ಬೀಳುವ ಜಮೀನಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ ಜಿಲ್ಲೆಯ ಪೊನ್ನಂಪೇಟೆ ತಾಲೂಕು ಹುದೂರು ಗ್ರಾಮದ ರೈತ ಬಿ.ಪಿ. ರವಿಶಂಕರ್ ಭತ್ತ ಬೆಳೆಯುವುದರಿಂದಲೂ ಲಾಭ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ಇವರು ಕಂಡುಕೊಂಡ ದಾರಿಯೂ ವಿಭಿನ್ನವಾಗಿದೆ.
ಭತ್ತವನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಯುವುದು ಲಾಭದಾಯಕ ಅಲ್ಲ ಎನ್ನುವುದು ಎಲ್ಲಾ ರೈತರ ಮಾತು. ಏರುತ್ತಿರುವ ಬಿತ್ತನೆ ಬೀಜ ಬೆಲೆ, ಕೈಗೆಟುಕದ ರಸಗೊಬ್ಬರ ದರ, ಆಗಾಗ್ಗೆ ದಾಳಿಯಿಡುವ ರೋಗಗಳು, ಅಗತ್ಯ ಕೆಲಸಗಳಿಗೆ ಲಭ್ಯವಾಗದ ಕೂಲಿಯಾಳುಗಳು ಹೀಗೆ ಹಲವು ಕಾರಣಗಳಿಂದ ಪ್ರತಿ ವರ್ಷವೂ ಭತ್ತ ಬೆಳೆಯ ಸಹವಾಸವೇ ಬೇಡ ಎಂದು ರೈತರು ದೂರ ಸರಿಯುತ್ತಿದ್ದಾರೆ. ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿ, ಹಾರಂಗಿ ಸೇರಿದಂತೆ ಸಮೃದ್ಧವಾಗಿ ಹರಿಯುವ ನದಿಗಳಿಂದಾಗಿ ಒಂದೊಮ್ಮೆ ಭತ್ತದ ಕಣಜ ಎಂದು ಗುರುತಿಸಿಕೊಂಡಿದ್ದ ಕೊಡಗಿನಲ್ಲಿ ಈಗ ಭತ್ತ ಬೆಳೆಯುವ ಪ್ರದೇಶ ೩೨ ಸಾವಿರದ ೫೭೦ ಹೆಕ್ಟೇರ್‌ಗಳಿಗೆ ಕುಸಿದಿದೆ. ಆದರೆ ಒಂದು ಅಂದಾಜಿನ ಪ್ರಕಾರ ಅತಿವೃಷ್ಠಿ, ಆನಾವೃಷ್ಟಿ ಸೇರಿದಂತೆ ವಿವಿಧ ಕಾರಣಗಳಿಂದ ಈ ಪ್ರಮಾಣ ಸುಮಾರು ೨೨ ಹೆಕ್ಟೇರ್ ಪ್ರದೇಶಗಳ ತನಕವೂ ಇಳಿದಿರಬಹುದು ಎನ್ನಲಾಗುತ್ತಿದೆ.
ಭತ್ತ ಕೃಷಿಯ ಬಗೆಗಿನ ಎಲ್ಲಾ ನಕರಾತ್ಮಕ ಅಂಶಗಳ ಮಧ್ಯೆ ಪೊನ್ನಂಪೇಟೆ ತಾಲೂಕು ಹುದೂರು ಗ್ರಾಮದ ರೈತ ಬಿ.ಪಿ. ರವಿಶಂಕರ್ ಭತ್ತ ಬೆಳೆಯನ್ನೂ ಲಾಭದಾಯಕವನ್ನಾಗಿ ಮಾಡಬಹುದು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಭತ್ತ ಬೆಳೆಯವುವಲ್ಲಿನ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿಕೊಂಡಿರುವ ಇವರು ಬೀಜದ ಉದ್ದೇಶಕ್ಕಾಗಿ ಭತ್ತ ಬೆಳೆಯುವ ಮೂಲಕ ಮಾದರಿ ರೈತನಾಗಿ ರೂಪುಗೊಂಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ಸಕಾಲಿಕ ಸಲಹೆಗಳ ಮೂಲಕ ಗುಣಮಟ್ಟದ ಬೀಜಗಳನ್ನು ತಮ್ಮ ಗದ್ದೆಗಳಲ್ಲಿ ಉತ್ಪಾದಿಸಿ ಕೃಷಿ ಇಲಾಖೆಗೆ ಕೊಡುವುದು ಮಾತ್ರವಲ್ಲದೆ ಆಸಕ್ತ ರೈತರಿಗೂ ಬೀಜದ ಭತ್ತ ಪೂರೈಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಬಿ.ಪಿ. ರವಿಶಂಕರ್ ಅವರ ಗದ್ದೆಯಲ್ಲಿ ಉತ್ಪಾದನೆ ಆಗುವ ಭತ್ತದ ಬೀಜಕ್ಕೆ ಕೊಡಗು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಭಾರಿ ಬೇಡಿಕೆ ಇದೆ.
ಕೊಡಗಿನಲ್ಲಿ ಭತ್ತದ ಬೇಸಾಯದ ಪ್ರಮಾಣ ಇಳಿಕೆ ಆಗುತ್ತಿರುವ ಈ ದಿನಗಳಲ್ಲಿ ರವಿಶಂಕರ್ ತಮ್ಮ ಕುಟುಂಬದ ೩೫ ಎಕರೆ ಜಾಗದಲ್ಲಿ ಕೇವಲ ಬೀಜದ ಉದ್ದೇಶಕ್ಕಾಗಿ ೩೫ ಬಗೆಯ ವೈವಿಧ್ಯಮಯ ತಳಿ ಭತ್ತ ಬೆಳೆಯುತ್ತಿದ್ದಾರೆ. ಕೊಡಗಿನ ಹವಾಮಾನಕ್ಕೆ ಸೂಕ್ತವಾದ ತಳಿಗಳನ್ನು ಮಾತ್ರ ಹೆಚ್ಚಾಗಿ ಬೆಳೆಯುತ್ತಾರೆ. ದೀರ್ಘಾವಧಿ, ಅಲ್ಪಾವಧಿ, ಎತ್ತರ ಹುಲ್ಲು, ಗಿಡ್ಡ ಹುಲ್ಲು, ಚಿಕ್ಕ ಅಕ್ಕಿ, ದಪ್ಪ ಅಕ್ಕಿ, ಕೆಂಪು ಅಕ್ಕಿ, ಸುವಾಸನೆಯ ಅಕ್ಕಿ, ಹೆಚ್ಚು ಇಳುವರಿಯ ಭತ್ತ ಹೀಗೆ ಬೇರೆ ಬೇರೆ ಗುಣ ಲಕ್ಷಣಗಳ ಜೀರಿಗೆ ಸಣ್ಣ, ದೊಡ್ಡಿ, ಚಿಂಗ್ರಿ, ಕೆಎಚ್‌ಪಿ ೯, ಕೆಎಚ್‌ಪಿ ೧೦, ಕೆಎಚ್‌ಪಿ ೧೧, ಫ್ರೈಜ್, ಬಾಸುಮತಿ, ಪಿಪಿಟಿ, ಅಂಜಲಿ, ಕೆಂಪು ರಾಜಮುಡಿ, ಬಿಳಿ ರಾಜಮುಡಿ, ಪಿಯುಬಿ, ಅಂಕುರ್ ಸೋನಂ ಸೋನಾ ಮಸೂರಿ, ಕಾಕೆ ಸಣ್ಣ, ಕೊಂಕಣಿ ಸಣ್ಣ, ಧಾನ್ಯಲಕ್ಷ್ಮೀ, ಅಕ್ಷತಾ ೩೩೩, ಶ್ರೀರಾಮ, ಕೃಷ್ಣ, ಅಂಕೂರ್, ಸೋನಂ, ಕಾಲನಮಕ್, ಸುಹಾನ ಹೀಗೆ ವಿವಿಧ ಹೆಸರುಗಳ ಭತ್ತದ ತಳಿಗಳು ಇವರಲ್ಲಿ ಲಭ್ಯವಿದೆ.
ಸ್ಥಳೀಯ ತಳಿಗಳಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಿಕೊಂಡು ತಮ್ಮದೇ ಆದ ವಿಶೇಷ ತಳಿಯೊಂದನ್ನು ರವಿಶಂಕರ್ ರೂಪಿಸಿದ್ದು, ಇದಕ್ಕೆ ತಾಯಿ ವಸುಧಾ ಅವರ ಹೆಸರನ್ನು ಇಟ್ಟಿದ್ದಾರೆ. ಕೊಡಗಿನ ಹವಾಗುಣಕ್ಕೆ ಹೇಳಿ ಮಾಡಿಸಿದಂತಿರುವ ಈ ತಳಿ ಮಧ್ಯಮಾವಧಿಯದ್ದಾಗಿದ್ದು, ಹೆಚ್ಚು ಇಳುವರಿ ಕೊಡುತ್ತದೆ. ರೋಗ ನಿರೋಧಕ ಶಕ್ತಿ ಹೊಂದಿದೆ. ಅನ್ನ ಮಾಡಲು ಈ ಭತ್ತದ ಅಕ್ಕಿ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ವಿಶೇಷ ರುಚಿಯನ್ನೂ ಹೊಂದಿದೆ. ರವಿಂಶಕರ್ ಕೆಲಸಕ್ಕೆ ಸಹೋದರ ಜಯಶಂಕರ್ ಸಾಥ್ ಕೊಡುತ್ತಾರೆ. ೫ ಬಗೆಯ ಪರಿಮಳಯುಕ್ತ ಭತ್ತ ತಳಿಯೂ ಇವರ ಬಳಿ ಲಭ್ಯವಿದೆ.
ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದವರು ಸಂಶೋಧಿಸಿದ ಕೆಎಚ್‌ಪಿ ೧೧ ತಳಿಯ ಭತ್ತಕ್ಕೆ ಇವರಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ತಳಿಯ ಭತ್ತ ಹೆಚ್ಚು ಇಳುವರಿ ಕೊಡುವುದಲ್ಲದೆ, ಉದ್ದದ ಹುಲ್ಲು ಇರುವುದರಿಂದ ರೈತರು ಈ ತಳಿಯ ಭತ್ತದ ಬೀಜ ಕೇಳಿ ಪಡೆದುಕೊಳ್ಳುತ್ತಾರೆ. ಈ ವರ್ಷ ಈ ತಳಿಯ ಭತ್ತವನ್ನು ರವಿಶಂಕರ್ ಎಕರೆಗೆ ೩೩ ಕ್ವಿಂಟಾಲ್‌ನಷ್ಟು ಬೆಳೆದಿದ್ದಾರೆ. ಕೆಎಚ್‌ಪಿ ೧೦ ತಳಿಯ ಭತ್ತದ ಬೀಜಕ್ಕೂ ಬೇಡಿಕೆ ಕಂಡು ಬಂದಿದೆ. ಇದು ಕೆಂಪು ಅಕ್ಕಿ ಆಗಿರುವುದರಿಂದ ಕುಚಲಕ್ಕಿಗೆ ಬಳಸುತ್ತಾರೆ. ಹಾಗಾಗಿ ಕೇರಳ ಮತ್ತು ದಕ್ಷಿಣ ಕನ್ನಡಕ್ಕೆ ಮಾರಾಟ ಮಾಡಲು ಕೊಡಗಿನಲ್ಲಿ ಈ ತಳಿಯ ಭತ್ತ ಬೆಳೆಯುತ್ತಾರೆ. ಮೈಸೂರು ರಾಜರು ಊಟ ಮಾಡುತ್ತಿದ್ದ ಅಕ್ಕಿ ಎಂದು ನಂಬುವ ರಾಜಮುಡಿ ಅಕ್ಕಿ ಹೊಳೆನರಸೀಪುರ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ರವಿಶಂಕರ್ ಅವರಲ್ಲಿ ಇದರ ಬೀಜಕ್ಕೂ ಬಹಳ ಬೇಡಿಕೆ ಇದೆ. ಬೆಂಗಳೂರು ಭಾಗದಿಂದ ಕೆಂಪು ರಾಜಮುಡಿ ಅಕ್ಕಿಗೆ ಬೇಡಿಕೆ ಇದೆ.
ಭತ್ತ ಬೇಸಾಯದ ಬಹುತೇಕ ಕೆಲಸಗಳಿಗೆ ರವಿಶಂಕರ್ ಯಂತ್ರ ಬಳಸುವುದಿಲ್ಲ. ೩೫ ಎಕರೆ ಜಾಗದಲ್ಲಿ ೩೫ ತಳಿಯ ಭತ್ತವನ್ನು ಪ್ರತ್ಯೇಕವಾಗಿ ಬೆಳೆದು ಎಲ್ಲಾ ಭತ್ತವನ್ನು ಆಯಾಯ ಜಾಗದಲ್ಲೇ ಸ್ವಚ್ಛ ಮಾಡಿ ಸಂಗ್ರಹಿಸಲಾಗುತ್ತದೆ. ಒಂದು ತಳಿಯ ಭತ್ತ ಮತ್ತೊಂದು ತಳಿಯ ಭತ್ತದ ಬೀಜದ ಜತೆಗೆ ಮಿಶ್ರ ಆಗದಂತೆ ಗರಿಷ್ಠ ಎಚ್ಚರಿಕೆ ವಹಿಸಲಾಗುತ್ತದೆ. ಬೀಜದ ತಳಿ ಶುದ್ಧತೆಗೆ ಆದ್ಯತೆ ಕೊಡುತ್ತಾರೆ. ಹಾಗಾಗಿಯೇ ಇವರು ರೈತರ ನಂಬಿಕೆ ಉಳಿಸಿಕೊಂಡಿದ್ದು, ಪ್ರತಿ ವರ್ಷ ರವಿಶಂಕರ್ ಬಳಿಯೇ ಭತ್ತದ ಬೀಜ ತೆಗೆದುಕೊಂಡು ಹೋಗುವ ದೊಡ್ಡದೊಂದು ರೈತರ ಬಳಗವೇ ಇದೆ. ಕೊಡಗು ಮಾತ್ರವಲ್ಲದೆ ಮೈಸೂರು, ಚಿಕ್ಕಮಗಳೂರು, ಹಾಸನ, ತುಮಕೂರು ಅಲ್ಲದೇ ಕೇರಳದ ವೈನಾಡು ಭಾಗದಿಂದಲೂ ರೈತರು ಆಗಮಿಸಿ ಇವರ ಬಳಿಯಿಂದ ಬೀಜದ ಭತ್ತ ಕೊಂಡೊಯ್ಯುತ್ತಾರೆ. ಕೇರಳದ ರೈತರು ಪರಿಮಳಯುಕ್ತ ಭತ್ತವನ್ನು ಹೆಚ್ಚು ಇಷ್ಟಪಡುತ್ತಾರೆ.
ಕ್ವಿಂಟಾಲ್‌ಗೆ ೫ ಸಾವಿರದಿಂದ ೧೦ ಸಾವಿರ ರೂ. ತನಕ ಬೆಲೆಯ ಬೀಜದ ಭತ್ತಗಳ ವಿಶಾಲ ಆಯ್ಕೆಯೇ ಇವರ ಬಳಿ ಇದೆ. ವರ್ಷಕ್ಕೆ ಸುಮಾರು ೨೫೦-೨೬೦ ಕ್ವಿಂಟಾಲ್ ಬೀಜದ ಭತ್ತ ರವಿಶಂಕರ್ ಮಾರಾಟ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಸುಮಾರು ೬೦೦ ಕ್ವಿಂಟಾಲ್ ಭತ್ತವನ್ನೂ ಮಾರುಕಟ್ಟೆಗೆ ಕಳುಹಿಸುತ್ತಾರೆ. ಕೇರಳದಲ್ಲಿ ಕೆಂಪಕ್ಕಿಗೆ ಬೇಡಿಕೆ ಇರುವುದರಿಂದ ಇದರ ಭತ್ತ ಕ್ವಿಂಟಾಲ್‌ಗೆ ೨,೫೦೦-೨,೬೦೦ ರೂ. ತನಕ ಮಾರಾಟ ಮಾಡಲಾಗುತ್ತದೆ. ಸ್ಥಳೀಯವಾಗಿ ಕೆಂಪು ರಾಜಮುಡಿ ಅಕ್ಕಿಯನ್ನು ಕೆಜಿಗೆ ೧೦೦ ರೂ. ನಂತೆ ಮಾರಾಟ ಮಾಡುತ್ತಾರೆ.
ರೈತರಿಂದ ಬರುವ ಬೇಡಿಕೆ ಆಧಾರದಲ್ಲಿ ಪ್ರತಿ ವರ್ಷವೂ ತಮ್ಮಲ್ಲಿ ಬೆಳೆಯುವ ಭತ್ತದ ತಳಿಯನ್ನು ರವಿಶಂಕರ್ ಬದಲಿಸುತ್ತಿರುತ್ತಾರೆ. ಆಗಾಗ್ಗೆ ಭತ್ತದಲ್ಲಿ ಅನೇಕ ಪ್ರಯೋಗಗಳನ್ನೂ ನಡೆಸುತ್ತಿರುತ್ತಾರೆ. ರೈತರಿಂದ ಬೇಡಿಕೆ ಬರುವ ಭತ್ತದ ತಳಿಯನ್ನು ಬೇರೆ ಕಡೆಯಿಂದಲೂ ತರಿಸಿಕೊಳ್ಳುತ್ತಾರೆ. ಇದಕ್ಕಾಗಿ ತಮ್ಮ ರೀತಿಯಲ್ಲೇ ಆಸಕ್ತಿ ಹೊಂದಿರುವ ಹೊರರಾಜ್ಯದ ರೈತರ ಜತೆಗೂ ಇವರು ಸಂಪರ್ಕ ಇಟ್ಟುಕೊಂಡಿದ್ದಾರೆ. ಭವಿಷ್ಯದಲ್ಲಿ ಗ್ರೋ ಬ್ಯಾಗ್‌ಗಳಲ್ಲಿ ಭತ್ತ ಬೆಳೆಯುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಭತ್ತದ ಬೇಸಾಯಕ್ಕೆ ಕಾರ್ಮಿಕರ ಕೊರತೆ ಇದೆ. ಭತ್ತ ಲಾಭದಾಯಕ ಬೆಳೆ ಅಲ್ಲ. ಇಲ್ಲಿ ಮಳೆಯಾಶ್ರಿತ ಬೇಸಾಯ ಆಗಿರುವುದರಿಂದ ಕೊಡಗಿನಲ್ಲಂತೂ ಲಾಭ ಗಳಿಸಲು ಸಾಧ್ಯವೇ ಇಲ್ಲ. ಕೊಡಗಿನಲ್ಲಿ ಶೇ. ೭೦ರಷ್ಟು ಜಮೀನು ಪಾಳು ಬಿಡಲಾಗಿದೆ. ರೈತರು ಭತ್ತ ಬೆಳೆಯಿಂದ ವಿಮುಖರಾಗುವುದನ್ನು ತಡೆಯಲು ಸರ್ಕಾರ ಭತ್ತಕ್ಕೆ ಉತ್ತಮ ದರ ನಿಗದಿ ಮಾಡಬೇಕು. ಭತ್ತ ಬೆಳೆಯುವವರಿಗೆ ಪ್ರೋತ್ಸಾಹ ಧನ ಅಥವಾ ಬೆಂಬಲ ಬೆಲೆ ಕೊಡಬೇಕು. ಕ್ವಿಂಟಾಲ್‌ಗೆ ಕನಿಷ್ಠ ೫ ಸಾವಿರ ರೂ. ಸಿಗಬೇಕು. ಈ ವ್ಯಾಪ್ತಿಯಲ್ಲಿ ನಾವು ಮಾತ್ರ ಭತ್ತ ಬೆಳೆಯುತ್ತಿದ್ದೇವೆ. ನಾವು ಭತ್ತ ಬೆಳೆದು ಮೇಲೆ ಬಂದವರು. ಹಾಗಾಗಿ ಬಂದ ದಾರಿ ಮರೆಯಬಾರದು ಎನ್ನುವ ಕಾರಣಕ್ಕೆ ಸ್ವ -ಆಸಕ್ತಿಯಿಂದ ಭತ್ತ ಬೆಳೆಯುತ್ತಿದ್ದೇವೆ. ನಾವು ಬೆಳೆದಿದ್ದನ್ನು ನಾವೇ ತಿನ್ನುವುದರಲ್ಲಿನ ಖುಷಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ.
ಬಿ.ಪಿ. ರವಿಶಂಕರ್, ಮಾದರಿ ರೈತ, ಹುದೂರು ಗ್ರಾಮ