ಕಬ್ಬು ನಾಶ ಮಾಡಿದ ರೈತ

27M.D.R.NEWS 2
ರೈತ ಲಕ್ಷ್ಮಣ್ ಒಣಗಿದ್ದ ಕಬ್ಬಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಿರುವುದು.
Published on

ಮದ್ದೂರು: ಮಳೆ ಬಾರದೆ ತೀವ್ರ ಬರ ಹಾಗೂ ಕೆ.ಆರ್.ಎಸ್.ನಿಂದ ನಾಲೆಗಳ ಮೂಲಕ ನೀರು ಹರಿಸದ ಪರಿಣಾಮ ಕಬ್ಬು ಸಂಪೂರ್ಣವಾಗಿ ಒಣಗಿದ ಹಿನ್ನೆಲೆಯಲ್ಲಿ ರೈನನೊಬ್ಬ ಮನನೊಂದು ಕಬ್ಬಿನ ಬೆಳೆಯನ್ನು ರೋಟಾವೇಟರ್ ಮೂಲಕ ಉಳುಮೆ ಮಾಡಿಸಿ ನಾಶ ಮಾಡಿದ್ದಾರೆ.


ಚನ್ನಸಂದ್ರ ಗ್ರಾಮದ ರೈತ ಲಕ್ಷ್ಮಣ್ 1 ಎಕರೆ 15 ಗುಂಟೆ ಜಮೀನಿನಲ್ಲಿ ಸುಮಾರು 1 ಲಕ್ಷ ರೂ. ಖರ್ಚು ಮಾಡಿ ಕಬ್ಬು ಬೆಳೆದಿದ್ದರು. ಇನ್ನೂ ಮೂರ್ನಾಲ್ಕು ತಿಂಗಳು ಕಳೆದಿದ್ದರೆ ಕಬ್ಬು ಕಟಾವಿಗೆ ಬರುತ್ತಿತ್ತು. ಆದರೆ, ಮಳೆ ಬಾರದೆ ತೀವ್ರವಾಗಿ ಬರ ಬಂದು ನಾಲೆಯಲ್ಲಿ ನೀರು ಬಾರದ ಪರಿಣಾಮ 7 ತಿಂಗಳ ಕಬ್ಬು ಒಣಗಿತ್ತು. ಇದರಿಂದ ಬೇಸರಗೊಂಡ ರೈತ ಕಬ್ಬಿನ ಬೆಳೆಯನ್ನು ನಾಶ ಮಾಡಿದ್ದರು.


ಈ ವೇಳೆ ಮಾತನಾಡಿದ ರೈತ ಲಕ್ಷ್ಮಣ್ ಅವರು, ಕಷ್ಟಪಟ್ಟು ಬೆಳೆದ ಕಬ್ಬಿನ ಬೆಳೆ ಕಣ್ಣೆದುರು ಒಣಗುತ್ತಿರುವುದನ್ನು ನೋಡಲಾಗದೆ ನಾಶ ಮಾಡಿದ್ದೇನೆ ಎಂದು ಕಣ್ಣೀರಿಟ್ಟರು.

ಸರ್ಕಾರ ಒಂದು ಅಥವಾ 2 ಕಟ್ಟು ನೀರನ್ನು ಕೆಆರ್‌ಎಸ್ ನಿಂದ ವಿಶ್ವೇಶ್ವರಯ್ಯ ನಾಲೆಯ ಮೂಲಕ ಹರಿಸಿದ್ದರೆ ನನ್ನಂತ ಸಾವಿರಾರು ರೈತರು ಕಷ್ಟಪಟ್ಟು ಬೆಳೆದಿದ್ದ ಕಬ್ಬಿನ ಬೆಳೆ ಉಳಿಯುತಿತ್ತು. ತಮಿಳುನಾಡು ಸರ್ಕಾರವನ್ನು ಒಲೈಸುವ ಸಲುವಾಗಿ ರಾಜ್ಯದ ರೈತರ ಹಿತ ಮರೆತು ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸದ ಪರಿಣಾಮ ನನಗೆ ಈ ದುರ್ಗತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net