

ಚನ್ನರಾಯಪಟ್ಟಣ: ತಾಲೂಕಿನ ಬಂಡಿಹಳ್ಳಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಸವರ್ಣಿಯರು ದಲಿತ ರೈತನ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಸುಟ್ಟು ಹಾಕಿದ್ದಾರೆ.
ರಂಗಪ್ಪ ಎಂಬುವವರ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್‌ಗೆ ಬೆಂಕಿ ಹಚ್ಚಿದ್ದು, ಆರೋಪಿಗಳಾದ ಮದನ್ ಹಾಗೂ ಮಂಜು ಪರಾರಿಯಾಗಿದ್ದಾರೆ.
ರಂಗಪ್ಪ ಅವರಿಗೆ ಸರ್ಕಾರದಿಂದ ಮಂಜೂರಾಗಿದ್ದ ಭೂಮಿ ತಮಗೆ ಸೇರಿದ್ದು ಎಂದು ಗ್ರಾಮದ ಕೆಲವರು ತಗಾದೆ ತೆಗೆದಿದ್ದರು. ಆದರೆ ರಂಗಪ್ಪ ಅವರು ಭೂಮಿ ಹದ್ದುಬಸ್ತು ಮಾಡಿಸಲು ಶನಿವಾರ ಸರ್ವೇ ಮಾಡಿಸಿದ್ದರು. ತಮ್ಮ ಜಮೀನಿನ ಗಡಿ ಗುರುತು ಮಾಡಿಸಿ ಜೆಸಿಬಿ ಬಳಸಿ ಸಮತಟ್ಟುಗೊಳಿಸುತ್ತಿದ್ದರು. ಆಗ ಸ್ಥಳಕ್ಕೆ ಬಂದು ವಿರೋಧ ವ್ಯಕ್ತಪಡಿಸಿದ ಆರೋಪಿಗಳು ಕಲ್ಲು ತೂರಾಟ ನಡೆಸಿದರು. ಜಮೀನಿನ ಬಳಿ ನಿಲ್ಲಿಸಿದ್ದ ರಂಗಪ್ಪ ಅವರ ಬೈಕ್‌ಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.