ಒಣಗುತ್ತಿರುವ ಬೆಳೆ ಹರಗಿಸಿದ ರೈತ

Haragu
Published on

ಮುಂಡರಗಿ ಮಳೆ ಇಲ್ಲದೆ ಒಣಗುವ ಹಂತಕ್ಕೆ ತಲುಪಿದ್ದ ಬೆಳೆಯನ್ನು ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ರೈತರೊಬ್ಬರು ಟ್ರ್ಯಾಕ್ಟರ್‌ನಿಂದ ಹರಗಿಸಿ ನಾಶ ಪಡಿಸಿದ್ದಾರೆ.

ರೈತ ಶೇಖರಪ್ಪ ಬೇಟಗೇರಿ ಅವರು 3.25 ಎಕರೆ ಪ್ರದೇಶದಲ್ಲಿ ಗೋವಿನಜೋಳ ಬಿತ್ತಿದ್ದರು. ಮಳೆ ಇಲ್ಲದ ಕಾರಣದಿಂದ ತೇವಾಂಶದ ಕೊರತೆಯಾಗಿ ಬೆಳೆ ಒಣಗಲು ಆರಂಭಿಸಿತ್ತು. ಇದನ್ನು ನೋಡಲಾಗದೆ ಬೆಳೆ ನಾಶ ಪಡಿಸಿದ್ದಾರೆ.

ಎಕರೆಗೆ 15ರಿಂದ 18ಸಾವಿರ ರೂ. ಖರ್ಚು ಮಾಡಿ ಗೋವಿನಜೋಳ ಬೆಳೆ ಬೆಳೆದಿದ್ದೆ. ಎರಡು ತಿಂಗಳ ಬೆಳೆಯಾಗಿದ್ದು, ಮಳೆ ಇಲ್ಲದೆ ಒಣಗುತ್ತಿತ್ತು. ಹೀಗಾಗಿ ಬೆಳೆ ನಾಶ ಪಡಿಸಲಾಗಿದೆ. ಭೂತಾಯಿಯನ್ನು ನಂಬಿ ಬದುಕುತ್ತೇವೆ. ಸಾಲ ಮಾಡಿ ಬೆಳೆ ಬೆಳೆದಿದ್ದೆ, ಈಗ ಮಳೆ ಕೈಕೊಟ್ಟಿದ್ದರಿಂದ ಬೆಳೆಯೂ ಬರಲಿಲ್ಲ. ಇದರಿಂದಾಗಿ ನಮಗೆ ಮುಂದೇನು ಮಾಡಬೇಕು ಅಂತ ದಿಕ್ಕು ತೋಚದಂತಾಗಿದೆ ಎಂದು ರೈತ ಶೇಖರಪ್ಪ ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಮುಂಗಾರಿನಲ್ಲಿ ಮಳೆ ಇಲ್ಲದೇ ರೈತರು ಬಿತ್ತನೆ ಮಾಡಿದ ಬಹುತೇಕ ಬೆಳೆ ಕೈಸೇರಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಮುಂಡರಗಿ ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈಬಿಟ್ಟಿದ್ದು ರೈತರಲ್ಲಿ ತೀವ್ರ ಬೇಸರ ಮತ್ತು ಆಕ್ರೋಶ ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net