

ಅಂಕೋಲಾ: 1992ರ ನಂತರದ ಉದಾರೀಕರಣ ಮತ್ತು ಜಾಗತೀಕರಣದ ಲಾಭ ಬೇರೆಲ್ಲ ಕ್ಷೇತ್ರಗಳಿಗೆ ಸಿಗುವಂತಾ ಗಿದ್ದರೂ ಕೃಷಿ ಕ್ಷೇತ್ರಕ್ಕೆ ಮಾತ್ರ ಇದುವರೆಗೂ ಸಿಗಲೇ ಇಲ್ಲ. ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗಬೇಕಿತ್ತು. ಅಂತಹ ಅವಕಾಶವನ್ನು ರೈತರು ಯಾರದೋ ಚಿತಾವಣೆಯಿಂದ ಕಳೆದುಕೊಳ್ಳುವಂತಾಯಿತು ಎಂದು ಪತ್ರಕರ್ತ ಅಜಿತ ಹನುಮಕ್ಕನವರ್ ಹೇಳಿದರು.
ಪಹರೆ ವೇದಿಕೆ ಉತ್ತಕ ಕನ್ನಡ ಹಾಗೂ ಅಂಕೋಲಾ ಬೆಳೆಗಾರರ ಸಮಿತಿ ವತಿಯಿಂದ ತಾಲೂಕಿನ ಬಾಸಗೋಡದ ಸರಯೂಬನದಲ್ಲಿ ನ್ಯಾಯವಾದಿ ನಾಗರಾಜ ನಾಯಕ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ 11ನೇ ಕೃಷಿ ಹಬ್ಬಕ್ಕೆ ಸಸಿ ನಾಟಿ ಮಾಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯ ಸಂತೃಪ್ತಿಗಾಗಿ ಏನೇ ಕೆಲಸ ಮಾಡಿದರೂ ರೈತರ ಜತೆ ಗದ್ದೆಗಿಳಿದಾಗ ಸಿಗುವ ಆತ್ಮ ಸಂತೃಪ್ತಿ ಬೇರೆಲ್ಲೂ ಸಿಗುವುದಿಲ್ಲ. ರೈತ ಜಗತ್ತಿಗೇ ಅನ್ನ ನೀಡುವಾತ. ಅವನದು ಅತ್ಯಂತ ಶ್ರೇಷ್ಠ ಕಾಯಕ. ಇವತ್ತು ರೈತ ತಾನು ಬೆಳೆದ ಬೆಳೆಗೆ ದರ ನಿಗದಿ ಮಾಡಲಾಗುತ್ತಿಲ್ಲ. ಮುಕ್ತ ಮಾರುಕಟ್ಟೆ ಕೂಡ ಸಿಗುತ್ತಿಲ್ಲ. ಲಾಭವೆಲ್ಲವೂ ದಲ್ಲಾಳಿಗಳ ಪಾಲಾಗುತ್ತಿದೆ ಎನ್ನುವುದು ದುರದೃಷ್ಟಕರ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಮಾತನಾಡಿ, ಕೃಷಿ ಚಟುವಟಿಕೆಗಳ ಉತ್ತೇಜನಕ್ಕೆ ಇರುವ ಯೋಜನೆಗಳ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇದೆ. ಆದರೆ, ಎಲ್ಲೆಲ್ಲಿ ಕೃಷಿ ಚಟುವಟಿಕೆ ನಿಂತಿವೆ ಎನ್ನುವುದರ ಕುರಿತು ಸರ್ಕಾರದ ಬಳಿ ಮಾಹಿತಿ ಇಲ್ಲ. ಅಧಿಕಾರಿಗಳು ಸ್ವತಃ ಕ್ಷೇತ್ರಕ್ಕೆ ಬಂದು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಬಾಸಗೋಡ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಕೃಷಿ ಭೀಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ರೈತರನ್ನು ಸನ್ಮಾನಿಸಿಲಾಯಿತು. ವೇದಿಕೆಯಲ್ಲಿ ನಾಗರಾಜ ನಾಯಕ, ಶೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷ್ಮೀಧರ ನಾಯಕ, ಬೆಳೆಗಾರರ ಸಮಿತಿಯ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ್, ದೇವರಾಯ ನಾಯಕ, ಕೃಷಿ ಭೂಮಿಯ ಒಡೆಯ ವೆಂಕಣ್ಣ ನಾಯಕ ಉಪಸ್ಥಿತರಿದ್ದರು.