

ಬ್ಯಾಡಗಿ: ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ನಾಗಪ್ಪ ಚನ್ನಬಸಪ್ಪ ಬನ್ನಿಹಟ್ಟಿ (45) ಮೃತ ರೈತ. ಎಂದಿನಂತೆ ರೈತ ನಾಗಪ್ಪ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮೇವು ತರಲು ಹೊಲಕ್ಕೆ ತೆರಳಿದ್ದಾರೆ. ಈ ವೇಳೆ ಹೊಲದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಅದನ್ನು ನೋಡದೆ ತುಳಿದಿದ್ದರಿಂದ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ.
ಹೊಲಕ್ಕೆ ಹೋದ ನಾಗಪ್ಪ ಅವರು ಸಂಜೆ 4 ಗಂಟೆಯಾದರೂ ಮನೆಗೆ ಬಾರದ್ದರಿಂದ ಕುಟುಂಬಸ್ಥರು ಅವರ ಮೊಬೈಲ್ ಕರೆ ಮಾಡಿದ್ದಾರೆ. ಆದರೆ, ಪದೇಪದೆ ಕರೆ ಮಾಡಿದರೂ ಸ್ವೀಕರಿಸಿದ್ದರಿಂದ ಸಂಶಯಗೊಂಡ ಕುಟುಂಬಸ್ಥರು ಹೊಲಕ್ಕೆ ತೆರಳಿದಾಗ ಅವಘಡ ಬೆಳಕಿಗೆ ಬಂದಿದೆ. ದೂರದಿಂದ ವಿದ್ಯುತ್ ತಂತಿ ಬಿದ್ದಿರುವುದು ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣ ಪಕ್ಕದ ಹೊಲದವರನ್ನು ಕೂಗಾಡಿ ಸೇರಿಸಿದ್ದಾರೆ. ಅಷ್ಟೊತ್ತಿಗಾಗಲೇ ನಾಗಪ್ಪ ಮೃತಪಟ್ಟಿರುವುದು ಖಾತ್ರಿಯಾಗಿದೆ. ಬಳಿಕ ಹೆಸ್ಕಾಂ ಸಿಬ್ಬಂದಿ ಕರೆಸಿ, ವಿದ್ಯುತ್ ಕಡಿತಗೊಳಿಸಿ, ರೈತನ ಶವವನ್ನು ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ತರಲಾಯಿತು.