

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಮಾಚಳ್ಳಿ ಗ್ರಾಮದ ಹಿರಿಯ ರೈತ ದಂಪತಿ ಸಮಗ್ರ ಕೃಷಿಯಿಂದ ವರ್ಷಕ್ಕೆ ಸುಮಾರು 8 ಲಕ್ಷ ರೂ.ಗೂ ಅಧಿಕ ಹಣ ಸಂಪಾದಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗ್ರಾಮದ ವೆಂಕಟೇಶ್-ರಾಧಾ ದಂಪತಿ ಬೇಸಾಯದಲ್ಲಿ ಯಶಸ್ಸು ಸಾಧಿಸಿದ್ದಾರೆ. ಸುಮಾರು 8 ಎಕರೆ ಪೈಕಿ ಮೂರೂವರೆ ಎಕರೆಯಲ್ಲಿ ರೇಷ್ಮೆ, ಎರಡು ಎಕರೆಯಲ್ಲಿ ರಾಗಿ, 600 ತೆಂಗಿನ ಮರ, 5 ಗುಂಟೆಯಲ್ಲಿ ಮೆಣಸು, 5 ಹಲಸು, 50 ಬಾಳೆ, 1 ಡ್ರ್ಯಾಗನ್, 1 ಸೇಬು, 1 ಚಕ್ಕೋತ, 2 ಮೂಸಂಬಿ, 12 ಸಪೋಟ, 10 ಸೀಬೆ, 50 ಶ್ರೀಗಂಧದ ಮರ, 5 ಪರಂಗಿ, 5 ನಾಟಿ ಕೋಳಿ, 10 ಪಾರಿವಾಳ, 2 ಎಮ್ಮೆ, 5 ಬಾತುಕೋಳಿ, 2 ಎತ್ತು ಸಾಕುವ ಜತೆಗೆ ಮನೆಗೆ ಬೇಕಾದ ಅರಿಶಿಣ, ಕೊತ್ತಂಬರಿ ಸೇರಿದಂತೆ ಎಲ್ಲ ರೀತಿಯ ತರಕಾರಿಗಳನ್ನು ಬೆಳೆಯುತ್ತಾರೆ. ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಿರುವುದರಿಂದ ಉತ್ತಮ ಫಸಲು ಬರುತ್ತಿದೆ.
ಕೂಲಿ ಕಾರ್ಮಿಕರ ಸಮಸ್ಯೆ ಕಾಡುತ್ತಿದ್ದರೂ ಈ ದಂಪತಿ ಯಾರನ್ನೂ ನೆಚ್ಚಿ ಕೂರದೆ, ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಯಾವುದೇ ರೀತಿಯ ನೀರಾವರಿ ವ್ಯವಸ್ಥೆ ಇಲ್ಲದ ಪರಿಣಾಮ ಲಕ್ಷಾಂತರ ರೂ. ವೆಚ್ಚ ಮಾಡಿ ಸುಮಾರು 5 ಬೋರ್‌ವೆಲ್‌ಗಳನ್ನು ಕೊರೆಸಿದ್ದು, ನೀರಿನ ಸಮಸ್ಯೆ ಕಂಡು ಬಂದಿಲ್ಲ.
ಕೋವಿಡ್ ಸಂದರ್ಭದಲ್ಲಿ ಇವರ ಪುತ್ರ ಯುವ ರೈತ ಎಂ.ವಿ.ಭರತ್‌ಗೌಡ 5 ಸಾವಿರಕ್ಕೂ ಹೆಚ್ಚು ಬಾಳೆ ಸಸಿ ನೆಟ್ಟಿದ್ದರು. ಉತ್ತಮ ಫಸಲು ಬಂದಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗದೆ ಸುಮಾರು 40 ರಿಂದ 50 ಲಕ್ಷ ರೂ.ನಷ್ಟ ಅನುಭವಿಸುವಂತಾಗಿತ್ತು. ನಂತರ ದಿನಗಳಲ್ಲಿ ಲಾಭ ದೊರೆಯಿತು ಎಂಬುದು ಪಾಲಕರ ಅಭಿಮತ.
ಆರು ವರ್ಷಗಳ ಹಿಂದೆ ಈ ಜಮೀನು ನೀಲಗಿರಿ ತೋಪಾಗಿತ್ತು. ಅದನ್ನು ಕೃಷಿ ಭೂಮಿ ಮಾಡಲು ಪ್ರಯತ್ನಪಡುವ ಜತೆಗೆ ಲಕ್ಷಾಂತರ ರೂ. ಖರ್ಚು ಮಾಡುವ ಸಂದರ್ಭ ಸ್ಥಳೀಯರಿಂದ ಅಗತ್ಯ ಸಹಕಾರ ದೊರೆತಿರಲಿಲ್ಲ. ಆದರೂ ಎದೆಗುಂದದೆ ಶ್ರಮಪಟ್ಟು ನೀಲಗಿರಿ ಮರಗಳನ್ನು ಬೇರೆಯವರಿಗೆ ಉಚಿತವಾಗಿ ನೀಡಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದರು. ನಂತರದ ದಿನಗಳಲ್ಲಿ ಈ ಜಾಗದಲ್ಲಿ ಉತ್ತಮ ಬೆಳೆಗಳನ್ನು ಬೆಳೆಯುವಲ್ಲಿ ಯಶ ಕಂಡರು.
ನೀಲಗಿರಿ ತೋಪನ್ನು ಕೃಷಿ ಭೂಮಿಯಾಗಿ ಮಾಡುವ ಮುನ್ನ ಮಳೆಯಾಶ್ರಿತ ಪ್ರದೇಶವಾಗಿದ್ದ ಜಮೀನಿನಲ್ಲಿ ಉತ್ತಮ ರೀತಿಯಲ್ಲಿ ರಾಗಿ, ಕಡಲೆಕಾಯಿ ಮುಂತಾದ ಬೆಳೆಗಳನ್ನು ಬೆಳೆದು ಸಾಕಷ್ಟು ಲಾಭ ಗಳಿಸಿದ್ದು ಈಗ ಇತಿಹಾಸ. ಕೃಷಿ ಚಟುಚಟಿಕೆಗಾಗಿ ತೋಟಗಾರಿಕೆ, ರೇಷ್ಮೆ, ಎಲ್ಲ ಇಲಾಖೆಗಳಲ್ಲೂ ಸಬ್ಸಿಡಿ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ಪಡೆದುಕೊಂಡಿರುವ ಈ ದಂಪತಿ ಇದೇ ರೀತಿಯಲ್ಲಿ ಬೇರೆ ರೈತರೂ ಬೇಸಾಯ ಮಾಡಲಿ ಎಂಬ ಆಶಯ ಹೊಂದಿದ್ದಾರೆ.
ಪಾಲಕರ ಬೇಸಾಯಕ್ಕೆ ಪುತ್ರ ಎಂ.ವಿ.ಭರತ್‌ಗೌಡ ಸಾಥ್ ನೀಡುವ ಜತೆಗೆ ಕೆಸ್ತೂರಿನಲ್ಲಿ ಆಟೋ ಮೊಬೈಲ್ಸ್ ಅಂಗಡಿ ತೆರೆದು ಲಾಭ ಕಂಡುಕೊಂಡಿದ್ದಾರೆ. ಇದರೊಂದಿಗೆ ಪುತ್ರಿ ಶ್ವೇತಾ ಹಾಗೂ ಅಳಿಯ ಶಿಕ್ಷಕ ನಾಗರಾಜು ಕೂಡ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತ ದಂಪತಿ ಉನ್ನತ ವಿದ್ಯಾಭ್ಯಾಸ ಮಾಡದ ಪರಿಣಾಮ ಇವರಿಗೆ ತಾಂತ್ರಿಕ ಬೇಸಾಯ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಕೊರತೆ ಇದೆ. ಇಲಾಖೆಯಿಂದ ಅಗತ್ಯ ಮಾಹಿತಿ ನೀಡಿದಲ್ಲಿ ಈ ದಂಪತಿ ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡಲಿದ್ದಾರೆ.
ನಾನು ಚಿಕ್ಕ ವಯಸ್ಸಿನಿಂದಲೂ ಬೇಸಾಯ ಮಾಡುತ್ತಿದ್ದು, ಬೇಸಾಯದಿಂದ ನನಗೆ ಅತ್ಯಂತ ಸಂತೋಷ ತಂದಿದೆ. ಜತೆಗೆ ಆರ್ಥಿಕವಾಗಿ ಲಾಭ, ಆರೋಗ್ಯ, ನೆಮ್ಮದಿಯೂ ಸಿಕ್ಕಿದೆ. ಇದಕ್ಕಿಂತ ಬೇರೇನು ಬೇಕು.
ವೆಂಕಟೇಶ್ ಸಮಗ್ರ ಕೃಷಿಕ
ನಾನು ನಿತ್ಯ ಜಮೀನಿಗೆ ಬಂದು ಭೂಮಿ ತಾಯಿಯ ಸೇವೆ ಮಾಡದಿದ್ದರೆ ಏನೋ ಒಂದು ರೀತಿಯ ಬೇಸರ. ಪ್ರತಿದಿನ ಜಮೀನಿಗೆ ಬಂದು ಕೆಲಸ ಮಾಡುವುದರಿಂದ ಒಂದು ರೀತಿಯ ಆತ್ಮತೃಪ್ತಿ ಜತೆಗೆ ನೆಮ್ಮದಿ ಸಿಗುತ್ತದೆ. ಕೂಲಿ ಹಾಳುಗಳನ್ನು ನಂಬದೆ ನಾನು ಹಾಗೂ ನನ್ನ ಪತಿ ವೆಂಕಟೇಶ್ ಸೇರಿ ಬೇಸಾಯ ಮಾಡುತ್ತಿದ್ದು, ನಮಗೆ ಇದರಲ್ಲಿ ಖುಷಿ ಇದೆ.
ರಾಧಾ ರೈತ ಮಹಿಳೆ ಮಾಚಹಳ್ಳಿ
ನನ್ನ ಪಾಲಕರು ಹಿಂದಿನಿಂದ ಕೃಷಿ ಮಾಡುತ್ತಿದ್ದು ಕೃಷಿಯಲ್ಲಿ ಸಾಧನೆ ಮಾಡುತ್ತಿರುವುದು ಸಂತೋಷ ತಂದಿದೆ. ಇವರ ಕೃಷಿ ಪ್ರೀತಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನ ಬೆಳೆಗಳನ್ನು ಬೆಳೆಯಲು ಚಿಂತನೆ ನಡೆಸಿದ್ದು, ಪಾಲಕರಿಗೆ ಅಗತ್ಯ ಸಹಕಾರ ನೀಡುವುದರ ಜತೆಗೆ ಆರ್ಥಿಕ ಸಹಾಯ ಮಾಡಲು ಸಿದ್ಧ.
ಎಂ.ವಿ.ಭರತ್‌ಗೌಡ ರೈತ ದಂಪತಿ ಪುತ್ರ