

ಬೆಟ್ಟದಪುರ: ನಾಗನಹಳ್ಳಿ ಪಾಳ್ಯ ಗ್ರಾಮದ ರೈತ ಮಹದೇವ (39) ಸಾಲಬಾಧೆ ತಾಳಲಾರದೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಯಿ ಲಲಿತಮ್ಮ ಅವರ ಹೆಸರಿನಲ್ಲಿದ್ದ 25 ಗುಂಟೆ ಜಮೀನು ಹಾಗೂ ಮಾವನ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು. ತಂಬಾಕು ಮತ್ತು ಶುಂಠಿ ಬೇಸಾಯಕ್ಕೆಂದು ಬೆಟ್ಟದಪುರದ ವಿಎಸ್‌ಎಸ್‌ಎನ್ ಬ್ಯಾಂಕ್‌ನಲ್ಲಿ 1.20 ಲಕ್ಷ ರೂ. ಹಾಗೂ ಖಾಸಗಿ ಸಂಸ್ಥೆಯಲ್ಲಿ 5 ಲಕ್ಷ ರೂ., ಸ್ನೇಹಿತರ ಬಳಿ 2 ಲಕ್ಷ ರೂ. ಸಾಲ ಮಾಡಿದ್ದರು. ವಿಪರೀತ ಮಳೆಯಿಂದಾಗಿ, ತಂಬಾಕು ಹಾಗೂ ಶುಂಠಿ ಬೆಳೆ ಸರಿಯಾಗಿ ಬಾರದೆ ನಷ್ಟ ಉಂಟಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಪೂರ್ಣಿಮಾ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಯಿತು.