

ಮಸ್ಕಿ: ಪಟ್ಟಣದ ವಾರ್ಡ್ 10 ಮತ್ತು 13 ಹೊಂದಿಕೊಂಡ ಶ್ರೀನಗರದ ಬಡಾವಣೆಯೊಂದರಲ್ಲಿ ಶುಕ್ರವಾರ ಹಳೆಯ ಬೃಹತ್ ಮರದ ದೊಡ್ಡ ತುಂಡು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಕಂಬ ನೆಲಕ್ಕರುಳಿದರೆ, ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಡಿಶ್ ಮಲ್ಲಯ್ಯಸ್ವಾಮಿ ಸಾಲಿಮಠ ಅವರ ಮನೆ ಮುಂಭಾಗದಲ್ಲಿ ಮರದ ದೊಡ್ಡ ಕೊಂಬೆ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಲೈಟ್ ಕಂಬ ಮುರಿದು ನೆಲಕ್ಕುರುಳಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರದ ತುಂಡು ಬಿದ್ದ ಕಾರಣ ಹಿಂಭಾಗ ಗಾಜು, ಬಾನಟ್ ಜಖಂಗೊಂಡಿದೆ. ಆ ಸಮಯದಲ್ಲಿ ಜನರ ಓಡಾಟ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
ತಕ್ಷಣ ಸ್ಥಳೀಯರು ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದು, ಸ್ಥಳಕ್ಕೆ ಬಂದು ವಿದ್ಯುತ್ ಕಡಿತಗೊಳಿಸಿದ್ದಾರೆ. ನಡುರಸ್ತೆಯಲ್ಲಿ ವಿದ್ಯುತ್ ಕಂಬ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜನರು ಹಾಗೂ ಬೈಕ್ ಸವಾರರು ಬೇರೆ ಮಾರ್ಗದ ಮೂಲಕ ಸಂಚರಿಸಿದರು.