

ತರೀಕೆರೆ: ಗುಣಮಟ್ಟದ ಅಡಕೆ ಇಲ್ಲದಿದ್ದಾಗ ಧಾರಣೆ ಕುಸಿತ ಸಹಜ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಹೇಳಿದರು.
ಸಹಕಾರ ಭಾರತಿ ಮತ್ತು ಮ್ಯಾಮ್ಕೋಸ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, ಬರ್ಮಾದಿಂದ ಅಡಕೆ ಮಲೆನಾಡು ಪ್ರವೇಶಿಸಿರುವುದು ಮಾತ್ರವಲ್ಲ, ಇಲ್ಲಿನ ರೈತರ ಹೆಸರಿನಲ್ಲಿ ಆವಕವಾಗಿರುವುದು ಆಘಾತ ಮೂಡಿಸಿದೆ. ಕಳ್ಳಮಾರ್ಗದಲ್ಲಿ ಬಂದ ಅಡಕೆ ವಹಿವಾಟನ್ನು ಮ್ಯಾಮ್ಕೋಸ್ ಸಮಯಪ್ರಜ್ಞೆಯಿಂದ ತಡೆದಿದೆ ಎಂದರು.
ಈ ಹಿಂದಿನ ಸರ್ಕಾರ ಟಾಸ್ಕ್‌ಫೋರ್ಸ್ ರಚಿಸಿದ ಪರಿಣಾಮ ಅಡಕೆ ಬೆಳೆಗಾರರಿಗೆ ಅನುಕೂಲವಾಗಿದೆ. ಅಡಕೆ ಕ್ಯಾನ್ಸರ್‌ಕಾರಕವಲ್ಲ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಈ ವರದಿ ಪಡೆದಿರುವ ಮ್ಯಾಮ್ಕೋಸ್ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಡಕೆಯ ಎಲ್ಲ ಮೂಲ ಗೊತ್ತಿರಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ಕಾರಣ ಸಿಗಲಿ ಎಂಬ ಉದ್ದೇಶಕ್ಕೆ ಮ್ಯಾಮ್ಕೋಸ್‌ನ ನೂತನ ಕಟ್ಟಡವನ್ನು ಅವರಿಂದ ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯು ಅಪಸ್ವರವಿಲ್ಲದೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ. ಸಂಘಟಿತ, ಪಾರದರ್ಶಕ ಸೇವೆ ಪರಿಣಾಮ ಮ್ಯಾಮ್ಕೋಸ್ ಬಲಾಢ್ಯವಾಗಿ ಬೆಳೆದಿದೆ. ನೆರೆಹೊರೆಯ ರಾಜ್ಯಗಳಿಗೆ ಲಕ್ಷಾಂತರ ಅಡಕೆ ಸಸಿ ಹೋಗಿರುವ ಕಾರಣ ಬೆಳೆ ವಿಸ್ತರಣೆಯಾಗುತ್ತಿದೆ. ಎಲೆಚುಕ್ಕೆ ರೋಗ ಆತಂಕ ಮೂಡಿಸಿದ್ದು, ಹತೋಟಿಗೆ ಕ್ರಮಗಳಾಗಬೇಕು ಎಂದು ಹೇಳಿದರು.
2005ರ ವಾರ್ಷಿಕ ಮಹಾಸಭೆಗೆ ಹಾಜರಾಗಿದ್ದ ಕೇವಲ 413 ಷೇರುದಾರರ ಸಂಖ್ಯೆ, ಕಳೆದ ಸಭೆ ಹೊತ್ತಿಗೆ 5,813ಕ್ಕೆ ಏರಿಕೆ ಕಂಡಿದೆ. ಸೆ.23ರಂದು ನಡೆಯುವ ಮಹಾಸಭೆಗೆ ಎಲ್ಲರೂ ಹಾಜರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಷೇರುದಾರ ತಮ್ಮಯ್ಯ ಮಾತನಾಡಿ, ಅಡಕೆ ಸಂಸ್ಕರಣೆಗೆ ಫಿಲ್ಟರ್ ಅಳವಡಿಕೆ ಸರಿಯಲ್ಲ. ಇದರಿಂದ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಫಿಲ್ಟರ್ ಅಳವಡಿಕೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಮಾತನಾಡಿ, ಒಂದೇ ರೀತಿಯ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ಲೀನಿಂಗ್ ಯಂತ್ರ ಅಳವಡಿಸಲಾಗಿದೆ. ಇದರ ಹೊರತು ತೂಕದ ವ್ಯವಸ್ಥೆಯಲ್ಲಿ ರಾಜಿ ಇಲ್ಲ ಎಂದರು.
ಅಡಕೆ ಸಿಪ್ಪೆ ಎಲ್ಲೆಂದರಲ್ಲಿ ಎಸೆದು ತೊಂದರೆಯಾಗುತ್ತಿರುವ ಮಾಹಿತಿ ಇದೆ. ಅಡಕೆ ಸಿಪ್ಪೆ ಮೌಲ್ಯವರ್ಧನೆಗೆ ಬೆಳೆಗಾರರು ಒತ್ತು ನೀಡಬೇಕು. ಶಿವಮೊಗ್ಗದ ನವಲೆ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿ ಕಡಿಮೆ ಬೆಲೆಗೆ ಲಭ್ಯವಾಗಿರುವ ಡಿ ಕಾಂಪೋಸ್ಟ್ ಪುಡಿ ಖರೀದಿಸಿ ಸಿಪ್ಪೆ ಮೇಲೆ ಸಿಂಪಡಿಸುವ ಮೂಲಕ ಗುಣಮಟ್ಟದ ಸಾವಯವ ಗೊಬ್ಬರ ತಯಾರಿಸಬೇಕು. ಈ ಗೊಬ್ಬರವನ್ನು ತೋಟಕ್ಕೆ ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕು. ಈ ದಿಸೆಯಲ್ಲಿ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಕೊಡಿಸಲಾಗುವುದು ಎಂದು ಹೇಳಿದರು.
ಮ್ಯಾಮ್ಕೋಸ್ ನಿರ್ದೇಶಕರಾದ ಡಾ. ಆರ್.ದೇವಾನಂದ್, ನರೇಂದ್ರ, ಬಡಿಯಣ್ಣ, ಸುರೇಶ್‌ಚಂದ್ರ, ಜಯಶ್ರೀ, ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಇತರರಿದ್ದರು.