

ದೊಡ್ಡಬಳ್ಳಾಪುರ: ಸಂಬಂಧಿಕರ ಆಸ್ತಿ ಕಬಳಿಸಲು ಸಂಚು ನಡೆಸಿದ ವ್ಯಕ್ತಿಯೊಬ್ಬ ಪಹಣಿದಾರನನ್ನೇ ತಂದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಆಸ್ತಿ ಮಾರಾಟ ಮಾಡಿರುವ ಆರೋಪ ಚನ್ನಾಪುರದಲ್ಲಿ ಕೇಳಿಬಂದಿದೆ.
ದೊಡ್ಡಬಳ್ಳಾಪುರ ತಾಲೂಕು ಚೆನ್ನಾಪುರ ಗ್ರಾಮದ ಪಿಳ್ಳಪ್ಪ ಎಂಬುವರಿಗೆ 2.12 ಎಕರೆ ಜಮೀನು ಇದೆ. ಇವರಿಗೆ ಇಬ್ಬರು ಪತ್ನಿಯರಿದ್ದು, ಪಿಳ್ಳಪ್ಪ ನಿಧನ ನಂತರ ಇವರ ಮಕ್ಕಳ ನಡುವೆ ಆಸ್ತಿ ಹಂಚಿಕೆ ವಿಚಾರಕ್ಕೆ ಜಗಳವಾಗಿತ್ತು. ಆದರೆ, ಆಸ್ತಿ ಮಕ್ಕಳ ಹೆಸರಿಗೆ ಆಗಿರಲಿಲ್ಲ, ಇದರ ಸುಳಿವು ಅರಿತ ಸಂಬಂಧಿಕನೇ ಆದ ಸಿ.ಮಂಜುನಾಥ್ ಈ ಆಸ್ತಿ ಹೊಡೆಯುವ ಸಂಚು ನಡೆಸಿದ್ದ.
ಪಿಳ್ಳಪ್ಪರು ತನ್ನ ತಂದೆಯೆಂದು ನಕಲಿ ವಂಶವೃಕ್ಷ ಸೇರಿ ಹಲವು ದಾಖಲೆ ಸೃಷ್ಟಿಸಿದ ಮಂಜುನಾಥ್, 2019ರಲ್ಲಿ ಪೌತಿ ಖಾತೆ ಮಾಡಿಸಿಕೊಂಡಿದ್ದಾನೆ. 2022ರ ಜನವರಿಯಲ್ಲಿ ಬೆಂಗಳೂರು ಮೂಲದ ಸಲ್ಮಾನ್ ದಾವೂದ್ ಎಂಬುವರಿಗೆ 24 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ನಮಗೆ ತಿಳಿಯದೆ ಲಕ್ಷಾಂತರ ರೂ. ಮೌಲ್ಯದ ಜಮೀನು ಮಾರಿ ವಂಚನೆ ನಡೆಸಿದ್ದಾನೆಂದು ಆರೋಪಿಸಿ ಪಿಳ್ಳಪ್ಪನ ಮಕ್ಕಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸಿ.ಮಂಜುನಾಥ್ ಅಸಲಿ ತಂದೆ ಹೆಸರು ಚಿಕ್ಕಮುನಿಯಪ್ಪ, ಶಾಲಾ ದಾಖಲಾತಿ ಮತ್ತು ಮತದಾನದ ಗುರುತಿನ ಚೀಟಿಯಲ್ಲಿ ಮಂಜುನಾಥ್ರ ತಂದೆ ಚಿಕ್ಕಮುನಿಯಪ್ಪ ಎಂದಿದೆ. ಆಸ್ತಿಗಾಗಿ ಮೋಸ ಮಾಡಿರುವುದು ಸಾಬೀತಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.