

ಬೆಳಗಾವಿ: ಮಕ್ಕಳಗಾದವರನ್ನೇ ಟಾರ್ಗೆಟ್ ಮಾಡುತ್ತಿದ್ದ ನಕಲಿ ಜ್ಯೋತಿಷಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸವರಾಜ ದುರ್ಗಪ್ಪ ಬುಡಬುಡಕೇರ (37) ಬಂಧಿತ ನಕಲಿ ಜ್ಯೋತಿಷಿ. ದೋಷ ನಿವಾರಣೆಗೆ ಸಂಪರ್ಕಿಸಿ ಎಂದು ರಾಮ್ಭಟ್ ಹೆಸರಿನಲ್ಲಿ ಭಿತ್ತಿಪತ್ರ ಮುದ್ರಿಸಿ, ಜಾಹೀರಾತು ನೀಡುತ್ತಿದ್ದ. ಕರೆ ಮಾಡುತ್ತಿದ್ದ ಮಹಿಳೆಯರಿಗೆ ಜ್ಯೋತಿಷ್ಯ ಹೇಳುತ್ತಿದ್ದ. ಅಷ್ಟೇ ಅಲ್ಲ, ಮಕ್ಕಳಾಗಬೇಕಂದರೆ ಅಭಿಷೇಕ ಮಾಡಬೇಕು ಎಂದೂ ನಂಬಿಸುತ್ತಿದ್ದ.
ಮಕ್ಕಳಾಗಿಲ್ಲ, ಏನಾದರೂ ದೋಷ ಇದೆಯೇ? ಎಂದು ಕಷ್ಟ ಹೇಳಿಕೊಳ್ಳುತ್ತಿದ್ದ ಮಹಿಳೆಯರಿಗೆ ಆನ್ಲೈನ್ನಲ್ಲಿ ಅಭಿಷೇಕ ಮಾಡಿಸುತ್ತೇವೆ, ಅಭಿಷೇಕ ಮಾಡಿದ ಬಳಿಕ ನಿಮಗೆ ಮಕ್ಕಳಾಗುತ್ತೆ ಎಂದು ನಂಬಿಸಿ 'ಫೋನ್ ಪೇ' ಮೂಲಕ ಸಾವಿರಾರು ರೂ. ಲಪಟಾಯಿಸಿದ್ದ. ನಕಲಿ ಜ್ಯೋತಿಷಿ ಮಾತು ನಂಬಿ ಹಣ ಕಳೆದುಕೊಂಡ ಮಹಿಳೆಯರು, ಮಾನಸಿಕವಾಗಿ ಕಿರಿಕಿರಿಯನ್ನೂ ಅನುಭವಿಸಿದ್ದಾರೆ. ಹಲವರಿಗೆ ಇದೇ ರೀತಿ ವಂಚಿಸಿದ್ದ ಬಸವರಾಜ್ ವಿರುದ್ಧ ಸಿಇಎನ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದರು. ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ಅವರು ಆರೋಪಿಯನ್ನು ಗುರುವಾರ ಬಂಧಿಸಿ, ಆತನ ಬ್ಯಾಂಕ್ ಅಕೌಂಟ್ ಸೀಜ್ ಮಾಡಿದ್ದಾರೆ.