

ಬಂಗಾರಪೇಟೆ: ಸುತ್ತಲೂ ಸುಂದರ ಕೋಟೆ. ಕೋಟೆ ಮೇಲೆ ನಿಂತು ನೋಡಿದರೆ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ... ಇಂಥದೊಂದು ದೃಶ್ಯ ನಮಗೆ ಕಾಣಸಿಗುವುದು ಬಂಗಾರಪೇಟೆ ತಾಲೂಕು ಬೂದಿಕೋಟೆ ಹೈದರ್ ಅಲಿ ಕೋಟೆಯಲ್ಲಿ.
ಹೈದರ್ ಅಲಿ ಹುಟ್ಟಿದ ಸ್ಥಳ ಎಂದೇ ಪ್ರಸಿದ್ಧಿ ಪಡೆದಿರುವ ಬೂದಿಕೋಟೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬೃಹತ್ತಾದ ಕೋಟೆ, ಕಲ್ಯಾಣಿ ಹಾಗೂ ಆಗಿನ ಕಾಲದಲ್ಲಿ ನಿಮಾರ್ಣವಾಗಿರುವ ವೇಣುಗೋಪಾಲಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ ಇಲ್ಲಿವೆ.
ಆದರೆ, ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ಇದನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವಲ್ಲಿ ರ್ನಿಲಕ್ಷ$್ಯ ತೋರಿರುವ ಪರಿಣಾಮ ಐತಿಹ್ಯ ಕೂಗಿ ಹೇಳುವಷ್ಟು ಇತಿಹಾಸ ಹೊಂದಿರುವ ಹೈದರ್ಅಲಿ ಕೋಟೆಯ ಸದ್ದು ಅಡಗಿ ಹೋಗಿದೆ. ಶಾಲಾ ಮಕ್ಕಳಿಗೆ, ಇತಿಹಾಸಕಾರರಿಗೆ ಅಧ್ಯಯನ ವಸ್ತುವಾಗಬೇಕಿದ್ದ ಬೂದಿಕೋಟೆ ಈಗ ಸೊರಗಿರುವುದು ಬೇಸರದ ಸಂಗತಿ.
ಪಠ್ಯ ಪುಸ್ತಕಗಳ ಮೂಲಕ ಇತಿಹಾಸ ಹೇಳುವುದಕ್ಕಿಂತ ಇಂಥ ಸ್ಮಾರಕಗಳನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಿದೆ. ಇತಿಹಾಸ ಹೇಳುವ ಗ್ರಂಥಾಲಯವಾಗಿ, ಹಿಂದಿನ ಘಟನೆಗಳನ್ನು ಜೀವಂತವಾಗಿ ತೋರಿಸಬಲ್ಲ ಚಿತ್ರಣವಾಗಿ ನಮ್ಮ ಕಣ್ಣಮುಂದೆ ಇರುವ ಐತಿಹಾಸಿಕ ನೆಲೆಗಳನ್ನು ಕಾಪಾಡಿದಾಗ ಮುಂದಿನ ಪೀಳಿಗೆಗೆ ನೈಜ ಇತಿಹಾಸದ ಅರಿವು ಸಿಗಲಿದೆ. ಇದಕ್ಕೆ ಪುಷ್ಟಿ ಎಂಬಂತೆ ಸ್ಮಾರಕ ಇರುವ ಸ್ಥಳದಲ್ಲೇ ವೇಣುಗೋಪಾಲಸ್ವಾಮಿ ದೇವಾಲಯ ಸ್ಥಾಪನೆ ಮಾಡಿರುವ ಹೈದರ್ ಅಲಿ ಭಾವೈಕ್ಯ ಮೆರೆದಿದ್ದಾರೆ. ಹಾಗಾಗಿಯೇ ಇತಿಹಾಸದ ವಸ್ತುವಾಗಿ ಪಠ್ಯ ಕ್ರಮದ ಪ್ರಾತ್ಯಕ್ಷಿಕೆಯಾಗಿ ಇಂಥ ಸ್ಮಾರಕಗಳನ್ನು ಬಳಸಿಕೊಂಡಾಗ ಮಾತ್ರವೇ ಇತಿಹಾಸದ ಆಳ&ಅಗಲ ಮುಂದಿನ ಪೀಳಿಗಗೆ ಕೊಂಡೊಯ್ಯಲು ಸಾಧ್ಯ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
ವರ್ಷಾನುಗಟ್ಟಲೆ ನೆಲೆ ನಿಂತು ಇತಿಹಾಸಕ್ಕೆ ಸಾಕ್ಷಿಯಾಗಿರುವ ಸ್ಮಾರಕಗಳನ್ನು ಉಳಿಸಿ ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ. ಇನ್ನಾದರೂ ಇಂತಹ ಸ್ಮಾರಕಗಳನ್ನು ಸರ್ಕಾರಗಳು ಉಳಿಸಲು ಕ್ರಮ ಕೈಗೊಳ್ಳಬೇಕಿದೆ.
ಬೂದಿಕೋಟೆ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಬೆಟ್ಟದ ಮೇಲೆ ಇತಿಹಾಸ ಹೊಂದಿರುವ ಹೈದರ್ ಅಲಿ ಜನ್ಮಿಸಿದ ಸ್ಥಳವಿದೆ. ಪಕ್ಕದಲ್ಲೇ ಇತಿಹಾಸ ಸಾರುವ ದೇವಸ್ಥಾನಗಳು, ಕೆಆರ್ಎಸ್ ಡ್ಯಾಂ ಹೋಲುವ ಮಿನಿ ಡ್ಯಾಂ ಎಂದೇ ಖ್ಯಾತಿಗೊಂಡಿರುವ ಮಾರ್ಕಂಡೇಯ ಜಲಾಶಯವೂ ಇದೆ. ಇದು ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿದೆ.
> ಕೃಷ್ಣಪ್ಪ ಜಿಪಂ ಮಾಜಿ ಸದಸ್ಯ
ಬೂದಿಕೋಟೆ
ಹಲವು ವರ್ಷಗಳ ಹಿಂದೆ ಬೂದಿಕೋಟೆಯನ್ನು ಪ್ರವಾಸಿಗರ ತಾಣವನ್ನಾಗಿ ಮಾಡುವ ಪ್ರಸ್ತಾವನೆ ಇತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದ ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಶಾಸಕರು, ಸಂಸದರು ಮುತುವರ್ಜಿ ವಹಿಸಿದರೆ ಪ್ರವಾಸಿಗರ ತಾಣ ಆಗುವುದರಲ್ಲಿ ಎರಡು ಮಾತಿಲ್ಲ. ಪ್ರವಾಸೋದ್ಯಮ ಇಲಾಖೆಯೂ ಬೂದಿಕೋಟೆ ಕಡೆ ಗಮನಹರಿಸಬೇಕಾಗಿದೆ.
> ಮಾರ್ಕಂಡೇಗೌಡ
ಗ್ರಾಪಂ ಮಾಜಿ ಅಧ್ಯಕ್ಷ, ಬೂದಿಕೋಟೆ