ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಕಾರ್ಯಾಗಾರ

sainika school
Published on

ಕುಶಾಲನಗರ: ಕೂಡಿಗೆ ಸೈನಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಎರಡು ದಿನಗಳ ಕಾರ್ಯಾಗಾರ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕೊಯಮತ್ತೂರಿನ ನಾಯಕತ್ವ ತರಬೇತಿ ಮತ್ತು ನಡವಳಿಕೆಯ ವಿಜ್ಞಾನಗಳ ಕೇಂದ್ರದ ಹಿರಿಯ ನಿರ್ದೇಶನ ಸಿಬ್ಬಂದಿ ಗ್ರೂಪ್ ಕ್ಯಾಪ್ಟನ್ ಕ್ಯಾಪ್ಟನ್ ರಾಹುಲ್ ತ್ಯಾಗಿ ನೇತೃತ್ವದಲ್ಲಿ ಮನುಷ್ಯನ ವರ್ತನೆ ಮತ್ತು ಬುದ್ಧಿವಂತಿಕೆಯ ಮೂಲಭೂತ ಅಂಶಗಳ ಮೇಲೆ ಕೇಂದ್ರೀಕರಿಸಲ್ಪಟ್ಟಿತ್ತು. ನಾಯಕತ್ವ ತರಬೇತಿ ಮತ್ತು ನಡವಳಿಕೆಯ ವಿಜ್ಞಾನಗಳ ಕೇಂದ್ರದ ವಿಂಗ್ ಕಮಾಂಡರ್ ಅಭಿಷೇಕ್ ಶರ್ಮಾ ರವರು ಪರಿಣಾಮಕಾರಿ ಸಂವಹನ ಮತ್ತು ವ್ಯಕ್ತಿತ್ವ ಅಭಿವೃದ್ಧಿ ಕೌಶಲ್ಯಗಳ ಕುರಿತು ಚಟುವಟಿಕೆಗಳೊಂದಿಗಿನ ಕಾರ್ಯಾಗಾರ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಹಲವು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು. ಶಾಲೆಯ ವಿದ್ಯಾರ್ಥಿನಿಯರು ಮತ್ತು ಬೋಧಕ ವರ್ಗಕ್ಕೆ ಆಯೋಜಿಸಲಾದ ವಿಶೇಷ ಸಂವಾದಾತ್ಮಕ ಅಧಿವೇಶನವಾಗಿತ್ತು. ಭಾಗವಹಿಸಿದವರಿಗೆ ತಮ್ಮ ಆಲೋಚನೆಗಳನ್ನು ವಿಶ್ಲೇಷಿಸಲು ಹಾಗೂ ಮಾನಸಿಕ ಒತ್ತಡದ ಯಶಸ್ವಿ ನಿರ್ವಹಣೆಯ ಕೌಶಲ್ಯ ವೃದ್ಧಿ ಅರಿಯಲು ಉತ್ತೇಜನ ನೀಡಿತು.

ಪ್ರಸ್ತುತ ಕಾರ್ಯಾಗಾರ ಶಾಲೆಯ ಕುವೆಂಪು ವಿವಿದೋದ್ಧೇಶ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದು, ಕಾರ್ಯಾಗಾರದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಬೋಧಕ-ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕಾರ್ಯಾಗಾರ ಸೈನಿಕ ಶಾಲೆ ಕೊಡಗಿನ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net