ಸಮಾಜದ ಬದಲಾವಣೆಗೆ ಕ್ರಿಯಾತ್ಮಕ ಕಾನೂನು ಶಿಸ್ತು ಅಗತ್ಯ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ

EVV
Published on

ಬೆಂಗಳೂರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳ ಪರಿವರ್ತನೆಗೆ ಕ್ರಿಯಾತ್ಮಕ ಕಾನೂನು ಶಿಸ್ತು ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ತಿಳಿಸಿದರು.

ರಾಮಯ್ಯ ಕಾನೂನು ಕಾಲೇಜು ವತಿಯಿಂದ ಗುರುವಾರ ‘ನ್ಯಾ.ಇ.ಎಸ್. ವೆಂಕಟರಾಮಯ್ಯ ಜಾಗತಿಕ ಕಾನೂನು ಕೌಶಲ ಅಕಾಡೆಮಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶೈಕ್ಷಣಿಕ ಸ್ವಾತಂತ್ರ್ಯವು ಸೈದ್ಧಾಂತಿಕ ಮೇಲಿರಬಾರದು. ಅದು ಸಮಾಜಕ್ಕೆ ಅಗತ್ಯವಿರುವ ಮತ್ತು ತುರ್ತು ಅಭಿವೃದ್ಧಿ ಮೇಲೆ ಇರಬೇಕು. ಬಹುಶಿಸ್ತೀಯ ಮತ್ತು ಬಹುಮುಖಿ ಕಾನೂನು ಶಿಕ್ಷಣವಿರಬೇಕು. ದೇಶದಲ್ಲಿರುವ ಮಾನವ ಸಂಪನ್ಮೂಲವನ್ನು ಸೇರಿಸಿಕೊಂಡು ಸಮರ್ಥ ಆಡಳಿತ ನೀಡಲು ಮತ್ತು ದೇಶದ ಅಭಿವೃದ್ಧಿಗೆ ಕಾನೂನು ಸಂಪನ್ಮೂಲವು ಬಳಕೆಯಾದಾಗ ನ್ಯಾಯ ದೊರೆಯಲಿದೆ ಎಂದು ಹೇಳಿದರು.

ಭಾರತದ ಭವಿಷ್ಯದ ಉನ್ನತ ಶಿಕ್ಷಣವು ಜ್ಞಾನಾಧಾರಿತ ಆರ್ಥಿಕ ತಳಹದಿಯ ಮೇಲೆ ನಿಂತಿದೆ. ಆದ್ದರಿಂದ ಭೌದ್ಧಿಕ ಬಂಡವಾಳ, ಉತ್ಕೃಷ್ಟತಾ ಕೇಂದ್ರಗಳನ್ನು ತೆರೆಯುವ ಮೂಲಕ ಜಗತ್ತಿನಲ್ಲಿಯೇ ಉತ್ತಮ ಶಿಕ್ಷಣ ನೀಡುವ ಅನಿವಾರ್ಯತೆಯು ಶಿಕ್ಷಣಸಂಸ್ಥೆಗಳ ಮೇಲಿದೆ ಎಂದರು.

ಕಾನೂನು ಶಾಲೆಗಳು ಸಂಶೋಧನೆಗಳ ಮೂಲಕ ಕಾನೂನು ಸ್ನೇಹಿ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಬೇಕು. ನ್ಯಾಯವಾದಿಗಳು ಇದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕಿದೆ. ಅಂತರ್ಜಾಲ ಮತ್ತು ತಂತ್ರಜ್ಞಾನ ಆಧಾರಿತ ಜ್ಞಾನವು ಕಾನೂನು ತಜ್ಞರಿಗೆ ವೇಗವಾಗಿ ಸಂಶೋಧನೆ ಕೈಗೊಳ್ಳಲು ಸಹಕಾರಿಯಾಗಲಿವೆ. ಶೀಘ್ರವಾಗಿ ಮಾಹಿತಿಗಳು ದೊರೆಯುವುದು ವ್ಯಾಜ್ಯ ಪ್ರಕರಣಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ ಎಂದರು.

ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿ, ಕೃತಕ ಬುದ್ಧಿಮತ್ತೆಯು ಔಪಚಾರಿಕ ಉದ್ಯಮದ ಮೌಲ್ಯಮಾಪನ ಸೂಚನೆಯನ್ನು ನೀಡಲಿದೆ. ಕೃತಕ ಬುದ್ಧಿಮತ್ತೆಯು ಆರೋಗ್ಯ, ಮಾನವೀಯತೆ, ಬ್ಯಾಂಕಿಂಗ್, ಕ್ರಿಪ್ಟೋ ಕರೆನ್ಸಿ ಮತ್ತು ಸೈಬರ್ ಸೆಕ್ಯೂರಿಟಿ ಸೇರಿ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ತರುತ್ತಿದೆ ಎಂದರು,

ಕಾನೂನು ಕಾಲೇಜಿನ ನಿರ್ದೇಸಕ ಎಂ.ಆರ್. ಆನಂದರಾಮ್ ಮಾತನಾಡಿ, ಭಾರತದ ಮುಂದಿನ 25 ವರ್ಷಗಳ ಅಭಿವೃದ್ಧಿಯು ಆರ್ಥಿಕ ನಾಯಕತ್ವದ ಮೇಲೆ ನಡೆಯಲಿದೆ ಎಂಬುದನ್ನು ಯುವಕರು ತಿಳಿದುಕೊಳ್ಳಬೇಕಿದೆ. ನಮ್ಮ ಸಂಸ್ಥೆಯಲ್ಲಿನ ಗುಣಮಟ್ಟದ ಉನ್ನತ ಶಿಕ್ಷಣವು ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯೋಗ ಪಡೆದುಕೊಳ್ಳಲು ಮತ್ತು ಉದ್ಯಮಗಳನ್ನು ಆರಂಭಿಸಲು ಸಹಕಾರಿಯಾಗಿದೆ. ಜ್ಞಾನ ಮತ್ತು ಕೌಶಲ ಆಧಾರಿತವಾದ ಸಾಮಾಜಿಕ ಜವಾವ್ದಾರಿಯ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಉಮಾಮಹೇಶ್ ಎಸ್., ಗೋಕುಲ ಶಿಕ್ಷಣ ಪ್ರತಿಷ್ಠಾನದ ಹಣಕಾಸು ವಿಭಾಗದ ಮುಖ್ಯಸ್ಥ ರಾಮಚಂದ್ರ ಜಿ., ಮುಖ್ಯ ಕಾರ್ಯನಿರ್ವಣಾಧಿಕಾರಿ ಬಿ.ಎಸ್. ರಾಮಪ್ರಸಾದ್ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಪ್ರತಿ ವರ್ಷ 1.2 ಲಕ್ಷ ಇಂಜಿನಿಯರಿಂಗ್ ಪದವೀಧರರು ಕಾಲೇಜಿನಿಂದ ಹೊರ ಬರುತ್ತಾರೆ. ಆದರೆ, ಕೇವಲ 19 ಸಾವಿರ ಜನರಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ. ಪದವಿಗಿಂತ ಕೌಶಲ ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ಷೇತ್ರದ ಕೌಶಲ ನೀಡಲು ದೇಶದಲ್ಲಿಯೇ ಮೊದಲ ಬಾರಿಗೆ ಕೌಶಲ ಅಕಾಡೆಮಿ ಆರಂಭಿಸಲಾಗಿದೆ. - - ಎಂ.ಆರ್. ಜಯರಾಂ, ಅಧ್ಯಕ್ಷ, ಗೋಕುಲ ಶಿಕ್ಷಣ ಪ್ರತಿಷ್ಠಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net