ಬತ್ತಿದ ಕೆರೆ, ಕಟ್ಟೆಗಳಿಗೆ ಜೀವಕಳೆ

KDR lake
ಕಡೂರು ತಾಲೂಕಿನ ಗೌಡನಕಟ್ಟೆಹಳ್ಳಿ ಕೆರೆ ತುಂಬಿ ಏರಿ ಒಡೆದು ನೀರು ಹರಿಯುತ್ತಿರುವುದು.
Published on

ಕಡೂರು: ತಾಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಕೆರೆಕಟ್ಟೆಗಳಿಗೆ ನೀರು ಹರಿಯಲಾರಂಭಿಸಿದೆ. ಬಹುತೇಕ ಚೆಕ್ ಡ್ಯಾಂಗಳಿಗೆ ವರ್ಷಧಾರೆ ಜೀವಕಳೆ ತಂದಿದೆ.

ಸೀಗೆಹಡ್ಲು ಗ್ರಾಮದಲ್ಲಿ ನೀರಿಲ್ಲದೆ ಭಣಗುಡುತ್ತಿದ್ದ ಕೆರೆಯನ್ನು ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು. ಸೋಮವಾರ ರಾತ್ರಿ ಸುರಿದ ಮಳೆಗೆ ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ಗ್ರಾಮಸ್ಥರು ಹರ್ಷಗೊಂಡಿದ್ದಾರೆ. ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬಂಟಗನಹಳ್ಳಿ, ಲಕ್ಕಡಿಕೋಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಬತ್ತಿರುವ ಕೊಳವೆಬಾವಿಗಳು ಮರುಜೀವ ಪಡೆದಂತಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಸೀಗೆಹಡ್ಲು ಹರೀಶ್ ವಿಜಯವಾಣಿಗೆ ತಿಳಿಸಿದರು.
ಕಸಬಾ ಭಾಗದ ಹೇಮಗಿರಿ ಬಳಿಯ ವಿಷ್ಣುಸಮುದ್ರ ಕೆರೆ ಸುತ್ತಮುತ್ತಲ ಜಮೀನು, ತೋಟಗಳು ಜಲಾವತಗೊಂಡಿವೆ. ಬೆಟ್ಟದ ಮೇಲಿನ ಹೇಮಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಿಂದ ಮಳೆ ನೀರು ಹರಿದು ಕೆರೆಗೆ ಮತ್ತಷ್ಟು ಒಳಹರಿವು ಹೆಚ್ಚಾಗಿ ಶೇ.75 ನೀರು ಸಂಗ್ರಹವಾಗಿದೆ. ಒಂದೂವರೆ ವರ್ಷದಿಂದ ಬತ್ತಿದ್ದ ಆವತಿ ನದಿಯಲ್ಲಿ ನೀರು ಹರಿಯುತ್ತಲಿದೆ. ಒಣಗಿದ್ದ ಹಳ್ಳಗಳಲ್ಲಿ ನೀರು ಹರಿಯಲಾರಂಭಿಸಿದೆ.
ಇನ್ನು ವಿ.ಯರದಕೆರೆಯ ದೊಡ್ಡಮ್ಮನಕೆರೆ, ಯಳಗೊಂಡನಹಳ್ಳಿ ಎಣ್ಣೆಹೊಳೆಯ ಚೆಕ್ ಡ್ಯಾಂ ತುಂಬಿ ಹರಿಯುತ್ತಿವೆ. ಚಿಕ್ಕಪಟ್ಟಣಗೆರೆ ಏರಿ ಎರಡು ಕಡೆ ಭಾಗಶಃ ಭೂ ಕುಸಿದಿದೆ. ಆಣೇಗೆರೆ ಕೆರೆ ಏರಿ ಸಹ ಒಂದೆರಡು ಕಡೆ ಬಿರುಕು ಬಿಟ್ಟಿದ್ದು ಸಣ್ಣ ನೀರಾವರಿ ಇಲಾಖೆ ಎಇಇ ದಯಾಶಂಕರ್ ಮತ್ತು ಕಿರಿಯ ಅಭಿಯಂತರ ಮಂಜುನಾಥ್ ಇಲಾಖೆಯ ವ್ಯಾಪ್ತಿಯ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನುಳಿದಂತೆ ಬಹುತೇಕ ತಗ್ಗುಪ್ರದೇಶದ ಜಮೀನು, ತೋಟಗಳು ಜಲಾವತಗೊಂಡವು. ಎಸ್.ಬಿದರೆ, ಜೋಡಿತಿಮ್ಮಾಪುರ ಹಾಗೂ ಸೀತಾಪುರ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ.
ಕಡೂರು 55 ಮಿಮೀ, ಬೀರೂರು 62.2, ಸಿಂಗಟಗೆರೆ 78.8, ಯಗಟಿ 64.2, ಎಮ್ಮೆದೊಡ್ಡಿ 62, ಪಂಚನಹಳ್ಳಿ 78.6, ಗಿರಿಯಾಪುರ 23.4, ಬಾಸೂರು 57, ಸಖರಾಯಪಟ್ಟಣ 58.2 ಮಿಮೀ ಮಳೆಯಾಗಿದೆ.
ಬಾಸೂರು ಸಮೀಪದ ಗೌಡನಕಟ್ಟೆ ಹಳ್ಳಿಯ ಕೆರೆ ತುಂಬಿ ಏರಿ ಒಡೆದ ಪರಿಣಾಮ ನೀರು ಪೋಲಾಗುತ್ತಿದ್ದು, ಈ ನೀರು ಬಿಸಲೆರೆ ಹಾಗೂ ಪಿ.ಕೋಡಿಹಳ್ಳಿ ಕೆರೆಗಳಲ್ಲಿ ತುಂಬಿಕೊಂಡಿದೆ. ನೀರು ಖಾಲಿಯಾಗುವ ತನಕ ಕೆರೆ ಏರಿ ಮೇಲೆ ಯಾವುದೇ ವಾಹನಗಳು ಸಂಚರಿಸುವಂತಿಲ್ಲ. ದುರಸ್ತಿಗೆ ಕೆಲ ದಿನಗಳು ಬೇಕಾಗಬಹುದು. ಎನ್‌ಡಿಆರ್‌ಎ್ ಅನುದಾನದಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಭಿಯಂತರರಿಗೆ ಸೂಚಿಸಲಾಗಿದೆ. ಮುಂಗಾರು ಆರಂಭವಾಗುವ ಮುನ್ನ ತಾಪಂ ವ್ಯಾಪ್ತಿಯ ಸಣ್ಣ ಕೆರೆಗಳಲ್ಲಿ ಹೂಳು ತೆಗೆಸಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಪಿಡಿಒಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಾಪಂ ಇಒ ಸಿ.ಆರ್.ಪ್ರವೀಣ್ ವಿಜಯವಾಣಿಗೆ ತಿಳಿಸಿದ್ದಾರೆ.
ತಾಲೂಕಿನ ಆಲಘಟ್ಟ, ಚಟ್ನಳ್ಳಿ ಭಾಗದ ಗ್ರಾಮಗಳಲ್ಲಿ ಬಿತ್ತನೆ ಮಾಡಿರುವ ಹತ್ತಿ ಬೆಳೆ ಪರಿಶೀಲಿಸಲು ಕೃಷಿ ಜಂಟಿ ನಿರ್ದೇಶಕಿ ಎಚ್.ಎಲ್.ಸುಜಾತಾ ಹಾಗೂ ತಾಲೂಕು ಎಡಿಎ ಅಶೋಕ್ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿತು. ಬಿತ್ತನೆ ಪ್ರಮಾಣದ ಇಲಾಖೆಯ ಮಾಹಿತಿಯನ್ನು ರೈತರಿಗೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net