ರಸ್ತೆಗೆ ಅಡ್ಡಲಾಗಿ ಬಿದ್ದ ಒಣಗಿದ್ದ ಬಿದಿರು

01 HANUR 5
ಮಲೆಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಒಣಗಿ ನಿಂತಿದ್ದ ಬಿದಿರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸಪಟ್ಟರು.
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟದ ಮಾರ್ಗದಲ್ಲಿ ಭಾನುವಾರ ಒಣಬಿದಿರು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸಿದರು.

ಕಳೆದ ವರ್ಷ ಬೇಸಿಗೆಯಲ್ಲಿ ವಿಪರೀತ ಬಿಸಿಲಿಗೆೆ ಈ ಮಾರ್ಗದ ರಸ್ತೆ ಬದಿಯಲ್ಲಿದ್ದ ಬಿದಿರುಗಳು ಸಂಪೂರ್ಣ ಒಣಗಿ ಅಲ್ಲಲ್ಲಿ ರಸ್ತೆಗೆ ಬಾಗಿದ್ದು, ರಸ್ತೆಗೆ ಬೀಳುವ ಸ್ಥಿತಿಯಲ್ಲಿತ್ತು. ಇದರಿಂದ ಮ.ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಆತಂಕ ಮನೆ ಮಾಡಿ, ತೆರೆವುಗೊಳಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೆಲವೆಡೆ ರಸ್ತೆಬದಿ ಒಣಗಿದ್ದ ಬಿದಿರುಗಳನ್ನು ತೆರೆವುಗೊಳಿಸಿ ಅರಣ್ಯದೊಳಗೆ ಸರಿಸಿದರೆ, ಇನ್ನು ಕೆಲವೆಡೆ ಅರ್ಧಂಬರ್ಧ ಕಡಿದು ಹಾಗೆಯೇ ಬಿಡಲಾಗಿತ್ತು. ಇದರಿಂದ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಈ ಮಾರ್ಗದ ಕೊಕ್ಕಬರೆ ಬಸ್ ನಿಲ್ದಾಣದ ತಿರುವಿನಲ್ಲಿ ಅರ್ಧಕ್ಕೆ ಕಟ್ ಮಾಡಲಾಗಿದ್ದ ಬಿದಿರು ರಸ್ತೆಗೆ ಅಡ್ಡಲಾಗಿ ಉರುಳಿದೆ. ಪರಿಣಾಮ ಅಮಾವಾಸ್ಯೆಯ ಪ್ರಯುಕ್ತ ಮ.ಬೆಟ್ಟಕ್ಕೆ ತೆರಳಿದ್ದ ಹೆಚ್ಚಿನ ವಾಹನ ಸವಾರರಿಗೆ ತೊಡಕಾಗಿ ಸಂಚರಿಸಲು ತೊಂದರೆ ಅನುಭವಿಸಿದರು. ಈ ಬಗ್ಗೆ ಮಹದೇಶ್ವರ ಭಕ್ತ ಸಮೂಹ ಫೇಸ್‌ಬುಕ್ ಖಾತೆಯಲ್ಲಿ ಚಿತ್ರವನ್ನು ಹರಿಬಿಟ್ಟಿದ್ದಾರೆ.

ಇನ್ನು ಇಡೀ ದಿನ ಆಗಾಗ್ಗೆ ಸುರಿದ ಮಳೆಯಿಂದಾಗಿ ಈ ಮಾರ್ಗದ ಗುಂಡಿಗಳಲ್ಲಿ ನೀರು ನಿಲ್ಲುವಂತಾಯಿತು. ಇದರಿಂದಲೂ ವಾಹನ ಸವಾರರು ತೊಂದರೆಯನ್ನು ಅನುಭವಿಸಿದರು. ಈ ಅವ್ಯವಸ್ಥೆಯ ಬಗ್ಗೆ ಭಕ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬಿದಿರನ್ನು ತೆರವುಗೊಳಿಸುವುದರ ಜತೆಗೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net