

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳು ಭರವಸೆಗಳಲ್ಲಿ ಜನಪರ ಅಭಿವೃದ್ಧಿಯ ಕನಸು ಬಿತ್ತುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದರು.
ಇಲ್ಲಿನ ವಿನಯ್ ಸಮುದಾಯ ಭವನದಲ್ಲಿ ಶನಿವಾರ ಕೈಗೊಂಡಿದ್ದ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿ, ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಜನರು ಬಿಜೆಪಿಯನ್ನು ಬೆಂಬಲಿಸಿದ್ದರು. ಆದರೆ, ಜನರಿಗೆ ಈಗ ಸತ್ಯ ಅರಿವಾಗಿದೆ. ಕೇಂದ್ರ ಸರ್ಕಾರ ವಿರೋಧದ ನಡುವೆಯೂ ಮಾರಕ ಕೃಷಿ ಕಾಯ್ದೆಗಳ ಜಾರಿಗೆ ಯತ್ನ, ಕರೊನಾ ನಿರ್ವಹಣೆಯಲ್ಲಿ ವೈಫಲ್ಯ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಸೇರಿ ಹಲವು ಸಮಸ್ಯೆಗಳ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.
ರಾಜ್ಯಾದ್ಯಂತ 600 ಬ್ಲಾಕ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ. ಇದರಲ್ಲಿ ಹೆಸರು ನೋಂದಾಯಿಸಿಕೊಂಡ ಪ್ರತಿಯೊಬ್ಬರು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿ, ಪಕ್ಷದ ಸಂಘಟನೆಗೆ ಶ್ರಮಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಹೇಳಿದರು.
ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಸವಾಲನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹುರುಪಿನಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸವಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರೋಧಿ ಆಡಳಿತ ನೀತಿಗೆ ಜನರು ಬೇಸತ್ತಿದ್ದಾರೆ. ಭರವಸೆಗಳನ್ನು ಮೂಡಿಸಿ, ಅಧಿಕಾರಕ್ಕೆ ಬಂದರೂ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕೈಗೊಳ್ಳದೇ ಕಡೆಗಣಿಸುತ್ತಿರುವುದಕ್ಕೆ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಮಿತ್ರಮ್ಮ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಮುನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ನಗರಸಭೆ ಸದಸ್ಯರಾದ ಅಂಬರೀಶ್, ನರಸಿಂಹಮೂರ್ತಿ, ಮುಖಂಡರಾದ ಕೃಷ್ಣಪ್ಪ, ರಾಮಕೃಷ್ಣಪ್ಪ, ಪ್ರೆಸ್ ಸುರೇಶ್, ನಾಯನಹಳ್ಳಿ ನಾರಾಯಣಸ್ವಾಮಿ, ಮಮತಾಮೂರ್ತಿ ಇದ್ದರು.