

ಗಂಗೊಳ್ಳಿ: ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರುವ ಎಲ್ಲ ಅರ್ಹತೆ ಹೊಂದಿರುವ ಗಂಗೊಳ್ಳಿ ಗ್ರಾಮ ಪಂಚಾಯಿತಿ ಕನಸು ಕನಸಾಗಿಯೇ ಉಳಿದಿದ್ದು, ಈ ಮಧ್ಯೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.
ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಸೂಚಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ನವೀನ್ ಗಂಗೊಳ್ಳಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
2011ರ ಜನಗಣತಿ ಪ್ರಕಾರ ಸುಮಾರು 13,014 ಜನಸಂಖ್ಯೆ ಹೊಂದಿರುವ ಕುಂದಾಪುರ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಗಂಗೊಳ್ಳಿ ಪಂಚಾಯಿತುಯನ್ನು ಮೇಲ್ದರ್ಜೆಗೇರಿಬೇಕೆಂಬ ಬೇಡಿಕೆ ಹಲವು ವರ್ಷಗಳ ಹಿಂದಿನದ್ದು. ಸರ್ಕಾರದ ಮಾನದಂಡದ ಪ್ರಕಾರ ಗಂಗೊಳ್ಳಿ ಜನಸಂಖ್ಯೆ ಮತ್ತು ಅಭಿವೃದ್ಧಿ ಆಧಾರದ ಮೇಲೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಲು ಅರ್ಹತೆ ಹೊಂದಿದ್ದರೂ ಸರ್ಕಾರಗಳು ಮಾತ್ರ ಮೇಲ್ದರ್ಜೆಗೇರಿಸಲು ಮೀನಮೇಷ ಎಣಿಸುತ್ತಿವೆ.
ಪ್ರಸ್ತುತ ಗ್ರಾಪಂ ಆದಾಯ 30 ಲಕ್ಷ ರೂ. ಮೀರಿದ್ದು, 4,459 ವಾಸ್ತವ್ಯ ಮನೆ ಮತ್ತು ವಾಣಿಜ್ಯ ಕಟ್ಟಡ ಹೊಂದಿದೆ. ಉದ್ಯೋಗಾವಕಾಶಗಳ ಶೇಕಡಾವಾರು ಪ್ರಮಾಣ 80ರಷ್ಟಿದ್ದರೆ, ಕೃಷಿಯೇತರ ಚಟುವಟಿಕೆಗಳು ಶೇ.65ರಷ್ಟಿವೆ. ಕೃಷಿ ಚಟುವಟಿಕೆಗಳು ಶೇ.10ರಷ್ಟಿದ್ದು, ವಾರ್ಷಿಕ ತಲಾ ಆದಾಯ 21,736 ರೂ.ಗಳಿವೆ. ರಾಜ್ಯದ ಅತಿ ದೊಡ್ಡ ಮೀನುಗಾರಿಕಾ ಬಂದರು ಪ್ರದೇಶವಾದ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಾಂದ್ರತೆ ಏರಿಕೆ ಆಗುತ್ತಿದ್ದು, ಕೃಷಿಯೇತರ ಭೂಮಿಗಳ ಹೆಚ್ಚಳ, ಜನವಸತಿ ಪ್ರದೇಶಗಳ ಅಭಿವೃದ್ಧಿ ಚಟುವಟಿಕೆಗಳು ಮೇಲ್ದರ್ಜೆಗೇರಿಸಲು ಪೂರಕ ಅಂಶಗಳಾಗಿತ್ತು. ಮೀನುಗಾರಿಕೆಯೇ ಈ ಭಾಗದ ಜನರ ಪ್ರಮುಖ ಕಸುಬಾಗಿದ್ದು, ಹೆಚ್ಚಿನ ಆರ್ಥಿಕ ಬೆಳವಣಿಗೆ ಕಾಣುವ ಅವಕಾಶಗಳನ್ನು ಗಂಗೊಳ್ಳಿ ಹೊಂದಿತ್ತು.
ಗಂಗೊಳ್ಳಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮೇಲ್ದರ್ಜೆಗೇರಿಸಬೇಕೆಂದು ಅನೇಕ ವರ್ಷಗಳಿಂದ ವಿವಿಧ ಸರ್ಕಾರಗಳ ಮುಂದೆ ಬೇಡಿಕೆ ಇಡಲಾಗಿತ್ತು. ಈ ಹಿಂದೆ ನಡೆದ ಅನೇಕ ಗ್ರಾಮಸಭೆಗಳಲ್ಲಿ ಸಾರ್ವಜನಿಕರು ಈ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಿದ್ದರು. ಜನರ ಬೇಡಿಕೆ ಮತ್ತು ಒತ್ತಾಯಕ್ಕೆ ಮಣಿದ ಈ ಭಾಗದ ಜನಪ್ರತಿನಿಧಿಗಳು ಮೇಲ್ದರ್ಜೆಗೇರಿಸುವ ಭರವಸೆ ನೀಡುತ್ತಲೇ ಬಂದಿದ್ದರು. ಇದಕ್ಕೆ ಪೂರಕವಾಗಿ ಎರಡು ಬಾರಿ ಜಿಲ್ಲಾಡಳಿತ ಸಂಬಂಧಪಟ್ಟ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರಿಂದ ಜನರಲ್ಲಿ ಸಹಜವಾಗಿ ಪಟ್ಟಣ ಪಂಚಾಯಿತಿ ಆಸೆ ಚಿಗುರೊಡೆದಿತ್ತು.
ಸರ್ಕಾರ ಗಂಗೊಳ್ಳಿ ಗ್ರಾಮಪಂಚಾಯಿತಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ತಿರಸ್ಕರಿಸುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಗಂಗೊಳ್ಳಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸುವಂತೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.
ಗಂಗೊಳ್ಳಿ ಗ್ರಾಪಂ ಅನ್ನು ಮೇಲ್ದರ್ಜೆಗೇರಿಸಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ. ಮೇಲ್ದರ್ಜೆಗೇರಿಸುವ ಎಲ್ಲ ಅರ್ಹತೆ, ಮಾನದಂಡ ಹೊಂದಿದ್ದು, ಜನಪ್ರತಿನಿಧಿಗಳು ಕೂಡ ಪಟ್ಟಣ ಪಂಚಾಯಿತಿ ಮಾಡುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಕೂಡ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸರ್ಕಾರ ಗಂಗೊಳ್ಳಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಮುಂದಾಗಿಲ್ಲ. ಹೀಗಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. -ನವೀನ್ ಗಂಗೊಳ್ಳಿ ಗಂಗೊಳ್ಳಿ ಸಾಮಾಜಿಕ ಕಾರ್ಯಕರ್ತ https://www.vijayavani.net/nadpalu-village-adoption https://www.vijayavani.net/honoring-the-achievers-in-sasthan