

ಡಾ.ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ ‘ಚಂದ್ರಗಿರಿ ತೀರದಲ್ಲಿ’ ನಾಟಕ ಪ್ರದರ್ಶನವು ಜೂನ್ 11 ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ನಡೆಯಲಿದೆ.ಅಮಿತ್ ಜೆ.ರೆಡ್ಡಿ ರಂಗಪಠ್ಯ, ವಿನ್ಯಾಸದ ಜತೆಗೆ ನಾಟಕವನ್ನೂ ನಿರ್ದೇಶಿಸಿದ್ದಾರೆ. ರಾಮಚಂದ್ರ ಹಡಪದ ಸಂಗೀತ ನೀಡಿದ್ದು, ಮಹೇಶ್ ಕಲ್ಲತ್ತಿ ಬೆಳಕಿನ ವಿನ್ಯಾಸ ಮಾಡಿದ್ದಾರೆ.
ಚಂದ್ರಗಿರಿ ತೀರದಲ್ಲಿ ಒಂದು ಮುಗ್ಧ ಹೆಣ್ಣಿನ ಕಥೆ. ಅಟ, ಓಟ ದಿಬ್ಬಣ ಎಂದು ಕಾಲ ಕಳೆಯುವ ಹುಡುಗಿಗೆ ಲಗ್ನ ಮಾಡಿ ಅವಳ ನರಕಯಾತನೆಗೆ ನಾಂದಿ ಹಾಡುತ್ತಾರೆ. ಮಗುವಿಗೆ ಜನ್ಮ ಕೊಟ್ಟ ಮೇಲೆ ಅವಳನ್ನು ತಂದೆ ತನ್ನ ಬಳಿ ಇರಿಸಿ, ಸುಖವಾಗಿದ್ದ ಗಂಡ ಹೆಂಡಿರ ಮಧ್ಯ ಭಿನ್ನಾಭಿಪ್ರಾಯ ಸೃಷ್ಟಿ ಮಾಡಿ, ತನ್ನ ಸಮಸ್ಯೆಯ ನೆಪದಲ್ಲಿ ಇಬ್ಬರನ್ನೂ ದೂರ ಮಾಡುತ್ತಾನೆ.
ತನ್ನ ತಪ್ಪನ್ನು ತಿದ್ದುಕೊಳ್ಳುವ ಅವಕಾಶ ತುಂಬಾ ಸಮಯದ ನಂತರ ಬಂದಾಗ ತಂದೆ ಆ ಮಗಳಿಗೆ ಇನ್ನೊಂದು ಮದುವೆ ಮಾಡಲು ನಿರ್ಧಾರ ಮಾಡುತ್ತಾನೆ. ಆದರೆ ತನ್ನಿಂದ ದೂರಾದ ಗಂಡನನ್ನು ಬಿಟ್ಟು ಬೇರೆ ಯಾರನ್ನು ಮದುವೆ ಆಗೋಲ್ಲ ಎಂದು ಹಠ ಹಿಡಿಯುತ್ತಾಳೆ.
ಎಲ್ಲರೂ ಅವಳ ಹಠಕ್ಕೆ ಬಗ್ಗಿದರೂ, ಅವರ ಧರ್ಮ ಬಗ್ಗುವುದಿಲ್ಲ. ನಾದಿರಾಳನ್ನು ಒಬ್ಬ ಶ್ರೀಮಂತ ಹೊಟ್ಟೆಬಾಕನಿಗೆ ಲಗ್ನ ಮಾಡಲು ನಿರ್ಧರಿಸುತ್ತಾರೆ. ಆಮೇಲೆ ಅವನ ಜತೆ ಒಂದು ದಿನ ಬಾಳ್ವೆ ಮಾಡಿದ ನಂತರ ತಲಾಖ್ ತೆಗೆದುಕೊಂಡು ಅವಳ ಮೊದಲ ಗಂಡನಿಗೆ ಮದುವೆ ಮಾಡಲು ನಿರ್ಧರಿಸುತ್ತಾರೆ. ಇದಕ್ಕೆ ನಾದಿರಾಳ ಮನಸ್ಸಾಕ್ಷಿ ಒಪ್ಪದೆ ಬೇರೆ ದಾರಿ ಇಲ್ಲದೆ ಚಂದ್ರಗಿರಿಯ ನದಿ ನೀರಲ್ಲಿ ನೀರಾಗುತ್ತಾಳೆ…ಕಥೆ ಹೀಗೆ ಮುಂದುವರಿಯುತ್ತದೆ.