

ಬೆಳಗಾವಿ: ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಹಿರಿಯರು, ಮಾರ್ಗದರ್ಶಕರು. ಪಕ್ಷವು ಅವರನ್ನ ಗುರುತಿಸುತ್ತದೆ, ನಾವೂ ಗುರುತಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಶನಿವಾರ ಡಾ.ಪ್ರಭಾಕರ ಕೋರೆ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವಿಧಾನಪರಿಷತ್ ಚುನಾವಣೆಯ 4 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಲಾಗಿದೆ. ಡಾ.ಕೋರೆ ನಮ್ಮ ಹಿರಿಯ ಮಾರ್ಗದರ್ಶಕರು. ಸದಾ ಕಾಲ ನಮ್ಮ ಮಾರ್ಗದರ್ಶಕರಾಗಿ ಇರುತ್ತಾರೆ. ಅವರಿಗೆ ಅವರದ್ದೇ ಆದ ಸ್ಥಾನವಿದೆ. 4 ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಅವರು ಮಾಡಿದ ಕೆಲಸಕ್ಕೆ ಮಹತ್ವವಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹಲವು ರೀತಿಯ ಮಾರ್ಗದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಮೆರಿಕದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ ಇರುವ ಕುರಿತು ಡಾ.ಪ್ರಭಾಕರ ಕೋರೆ ಅವರು 4 ತಿಂಗಳ ಮುಂಚಿತವಾಗಿ ನನ್ನ ಗಮನಕ್ಕೆ ತಂದು ಹೋಗಿದ್ದರು. ಹಾಗಾಗಿ, ಅವರು ಚುನಾವಣೆ ಚಟುವಟಿಕೆಗಳಲ್ಲಿ ಭಾಗವಹಿಸಿರಲಿಲ್ಲ. ಇದೀಗ ಅವರು ಆಗಮಿಸಿದ್ದಾರೆ. ಅವರ ರಾಜಕೀಯ ಅನುಭವವನ್ನು ಪಕ್ಷವು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತ ಕ್ಷೇತ್ರ, ಧಾರವಾಡ, ಗದಗ, ಹಾವೇರಿ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರ ಹಾಗೂ ಮೈಸೂರು ಪದವೀಧರ ಮತ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಕಾವೇರಿದೆ.